ADVERTISEMENT

ಕಲಾಂ ಕನಸು ಈಡೇರಿಸಲು ಸಲಹೆ

ಸೈಯದ್‌ ಸಜ್ಜದ್‌ ಅಹಮದ್‌ಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 3:20 IST
Last Updated 16 ಅಕ್ಟೋಬರ್ 2020, 3:20 IST
ವಿಜಯಪುರದ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ವಿಜ್ಞಾನಿ ಸೈಯದ್ ಸಜ್ಜದ್ ಅಹಮದ್ ಅವರನ್ನು ಸನ್ಮಾನಿಸಲಾಯಿತು
ವಿಜಯಪುರದ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ವಿಜ್ಞಾನಿ ಸೈಯದ್ ಸಜ್ಜದ್ ಅಹಮದ್ ಅವರನ್ನು ಸನ್ಮಾನಿಸಲಾಯಿತು   

ವಿಜಯಪುರ: ‘ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕನಸುಗಳನ್ನು ಈಡೇರಿಸುವ ಹೊಣೆಗಾರಿಕೆ ಯುವಜನಾಂಗದ ಮೇಲಿದೆ’ ಎಂದು ಇಂಡಿಯನ್ ಸೀನಿಯರ್ ಛೇಂಬರ್ ಅಧ್ಯಕ್ಷ ವಿ.ಎನ್. ರಮೇಶ್ ಹೇಳಿದರು.

ಪಟ್ಟಣದ ರಾಯಲ್ ಪಬ್ಲಿಕ್ ಶಾಲಾ ಆವರಣದಲ್ಲಿ ಭಾರತೀಯ ಸೀನಿಯರ್ ಛೇಂಬರ್ ಹಾಗೂ ಜೇಸಿಐ ವಿಜಯಪುರದಿಂದ ಆಯೋಜಿಸಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ವಿಜ್ಞಾನಿ ಸೈಯದ್ ಸಜ್ಜದ್ ಅಹಮದ್ ಅವರಿಗೆ ‘ಅಬ್ದುಲ್ ಕಲಾಂ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಪೋಖ್ರಾನ್-2 ಪರಮಾಣು ಪರೀಕ್ಷೆಯಲ್ಲಿ ಅಬ್ದುಲ್ ಕಲಾಂ ಅವರ ಪಾತ್ರ ಮಹತ್ವದ್ದಾಗಿತ್ತು. ವಿಜ್ಞಾನ ಕ್ಷೇತ್ರದಲ್ಲಿನ ಅವರ ಸಾಧನೆ ಪರಿಗಣಿಸಿ ಕೇಂದ್ರ ಸರ್ಕಾರ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಿದೆ. ಕಲಾಂ ಅವರು ಭಾರತದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಕ್ಷಿಪಣಿ ಅಭಿವೃದ್ಧಿ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು. ಯುವಜನರು ಅವರನ್ನು ಆದರ್ಶವಾಗಿ ತೆಗೆದುಕೊಂಡು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹೊಸ ಆವಿಷ್ಕಾರಗಳನ್ನು ಮಾಡುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಗಣಿತ ಶಿಕ್ಷಕ ಶಿವಕುಮಾರ್ ಮಾತನಾಡಿ, ಕ್ಷಿಪಣಿ ಮತ್ತು ಉಡಾವಣಾ ತಂತ್ರಜ್ಞಾನದ ಅಭಿವೃದ್ಧಿಯ ಅಧ್ಯಯನದಿಂದ ಕಲಾಂ ಅವರು ಭಾರತದ ಕ್ಷಿಪಣಿ ಮಾನವ ಎಂದೇ ಪ್ರಸಿದ್ಧರಾಗಿದ್ದರು. ಅವರು ಶಾಲೆಯಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದರು. ಆದರೆ, ಕಠಿಣ ಪರಿಶ್ರಮ ಪಡುತ್ತಿದ್ದರು. ಅವರಿಗೆ ಗಣಿತದಲ್ಲಿ ವಿಶೇಷ ಆಸಕ್ತಿ ಇತ್ತು ಎಂದು ಹೇಳಿದರು.

ವಿಜ್ಞಾನಿ ಸೈಯದ್ ಸಜ್ಜದ್ ಅಹಮದ್ ಮಾತನಾಡಿದರು.

ಜೇಸಿಐ ಅಧ್ಯಕ್ಷ ಜನಾರ್ಧನ ಮೂರ್ತಿ, ಸುಬ್ರಮಣಿ ಶೆಟ್ಟಿ, ಅನಿಸ್ ಉರ್ ರೆಹಮಾನ್, ಚಂದ್ರಮುಖಿ ರಮೇಶ್, ಜೆ.ಆರ್. ಮುನಿವೀರಣ್ಣ, ಗೋವಿಂದರಾಜು, ನಳಿನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.