ADVERTISEMENT

ಅಂಧರ ಆಶಾಕಿರಣ ಲೂಯಿ ಬ್ರೈಲ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 6:35 IST
Last Updated 6 ಜನವರಿ 2014, 6:35 IST

ಚಾಮರಾಜನಗರ: ‘ಲೂಯಿ ಬ್ರೈಲ್ ಅವರು ಬ್ರೈಲ್‌ ಲಿಪಿ ಕಂಡುಹಿಡಿಯುವ ಮೂಲಕ ವಿಶ್ವದಲ್ಲಿರುವ ಎಲ್ಲ ಅಂಧರ ಬಾಳಿಗೆ ಬೆಳಕು ನೀಡಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ. ನಾಗಶ್ರೀ ಹೇಳಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೂಯಿ ಬ್ರೈಲ್ ಅವರ ಜನ್ಮದಿನಾಚರಣೆ ಯಲ್ಲಿ ಅವರು ಮಾತನಾಡಿದರು.
ಲೂಯಿ ಬ್ರೈಲ್‌ ಜನಿಸಿದ ಮೂರು ವರ್ಷ  ನಂತರ ಆಕಸ್ಮಿಕವಾಗಿ ಅವರ ಕಣ್ಣಿಗೆ ಕಬ್ಬಿಣದ ದಬ್ಬಳ ತಾಗಿತು. ಹೀಗಾಗಿ, ಕಣ್ಣು ನಂಜಾಗಿ ದೃಷ್ಟಿ ಕಳೆದುಕೊಂಡರು. ಈ ಹಿನ್ನೆಲೆಯಲ್ಲಿ ಅಂಧರ ಬಾಳಿಗೆ ಬೆಳಕು ನೀಡಲು ಬ್ರೈಲ್‌ ಲಿಪಿಯನ್ನು ಜಗತ್ತಿಗೆ ಪರಿಚಯಿಸಿದರು ಎಂದರು. 

ಮೈಸೂರಿನ ಲಲಿತಕಲಾ ಕಾಲೇಜಿನ ಉಪನ್ಯಾಸಕ ಡಾ.ಕೆ.ಟಿ. ಉದಯಕಿರಣ್ ಮಾತನಾಡಿ, ಲೂಯಿ ಬ್ರೈಲ್ ಅನ್ವೇಷಣೆ ಮಾಡಿರುವ ಆರು ಚುಕ್ಕಿಗಳ  ಲಿಪಿ ಪ್ರಪಂಚದ ಎಲ್ಲ ಭಾಷೆಗಳಲ್ಲೂ ಅಂಧರನ್ನು ಮುನ್ನಡೆಸುವ ಸಂಕೇತ ಆಗಿದೆ ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಎಚ್‌.ಕೆ. ರೇವಣೇಶ್ ಮಾತನಾಡಿ, ಇಲಾಖೆಯಿಂದ ಅಂಗವಿಕಲರಿಗೆ ಹಲವು ಸೌಲಭ್ಯ ದೊರೆಯುತ್ತಿವೆ. ಇತರೇ ಇಲಾಖೆಗಳಲ್ಲಿ ದೊರೆಯುವ ಶೇ 3ರಷ್ಟು ಅನುದಾನವನ್ನು ಅಂಗವಿಕಲ ಫಲಾನುಭವಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.

ಮೊಬಿಲಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ಎಸ್.ಎನ್. ಆನಂದ್ ಮಾತನಾಡಿ, ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಹೇಳಿದರು.

ಬಿ. ವಿಜಯಗಾಂತ್, ದೀಪಾ ಅಕಾಡೆಮಿ ವಸತಿಶಾಲೆಯ ಮುಖ್ಯ ಶಿಕ್ಷಕಿ ಶಿಲ್ಪಶ್ರೀ ಹಾಜರಿದ್ದರು. ಚಂದಕವಾಡಿಯ ಚಂದನ ಅಂಗವಿಕಲರ ಮಹಾಸಂಘದ ಮಹದೇವು ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.