ADVERTISEMENT

‘ಅಕ್ರಮ ಚಟುವಟಿಕೆ ಬಿಡಿ, ಅರಣ್ಯ ರಕ್ಷಿಸಿ’

ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡಯ್ಯ ಮನವಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 12:47 IST
Last Updated 10 ಜೂನ್ 2018, 12:47 IST

ಹನೂರು: ಬುಡಕಟ್ಟು ಜನರು ಮಧ್ಯವರ್ತಿಗಳ ಕೈಗೊಂಬೆಯಾಗಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದನ್ನು ಬಿಟ್ಟು ಅರಣ್ಯ ಸಂಪತ್ತನ್ನು ರಕ್ಷಿಸಲು ಮುಂದಾಗಬೇಕು ಎಂದು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡಯ್ಯ ಮನವಿ ಮಾಡಿದರು.

ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಸೂಳೆಕೋಬೆ ಬುಡಕಟ್ಟು ಹಾಡಿಯಲ್ಲಿ ಶನಿವಾರ ಸೋಲಿಗ ಅಭಿವೃದ್ಧಿ ಸಂಘ ಮತ್ತು ನೇಚರ್‍ ಕನ್ಸರ್ವೇಷನ್ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ‘ಅರಣ್ಯ ಸಂರಕ್ಷಣೆ ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರ ನೀಡುವ ವಿವಿಧ ಸೌಕರ್ಯಗಳನ್ನು ಬುಡಕಟ್ಟು ಸಮುದಾಯ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕುಡಿತ, ಜೂಜು ಮತ್ತು ಅರಣ್ಯ ಸಂಪತ್ತನ್ನು ಲೂಟಿ ಮಾಡುವುದನ್ನು ಬಿಡಬೇಕು. ಬುಡಕಟ್ಟು ಜನರಿಗೆ ಪ್ರಕೃತಿಯೇ ದೇವರು. ಅದನ್ನು ಹಾಳು ಮಾಡದಂತೆ ನೋಡಿಕೊಳ್ಳಬೇಕು ಎಂದರು.

ADVERTISEMENT

ನೇಚರ್‍ ಕನ್ಸರ್ವೇಷನ್ ಫೌಂಡೇಷನ್‌ನ ಗಣೇಶ್ ಮಾತನಾಡಿ, ‘ಮುಂದಿನ ಪೀಳಿಗೆಗಾಗಿ ಪ್ರಕೃತಿಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕಾಗಿ ಸಂಘ–ಸಂಸ್ಥೆಗಳು ಹಾಗೂ ಇಲಾಖೆ ಒಟ್ಟಾಗಿ ಸೇರಿ ಅರಣ್ಯ ಸಂರಕ್ಷಣೆ ಮಾಡಬೇಕು. ಅರಣ್ಯದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಸಿದ್ದಮ್ಮ, ಕಾರ್ಯದರ್ಶಿ ಮುತ್ತಯ್ಯ, ಸೂಳೆಕೋಬೆ ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನಯ್ಯ, ರಂಗೇಗೌಡ ಹಾಗೂ ವಿವಿಧ ಗ್ರಾಮಗಳಿಂದ ಬುಡಕಟ್ಟು ಜನರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.