ADVERTISEMENT

ಅಜಾಗರೂಕ ಚಾಲನೆ: ಆರೋಪಿಗಳಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 7:25 IST
Last Updated 14 ಜನವರಿ 2012, 7:25 IST

ಚಾಮರಾಜನಗರ: ಅಜಾಗರೂಕವಾಗಿ ವಾಹನ ಚಾಲನೆ ಮಾಡಿ ಬಾಲಕಿಯ ಸಾವಿಗೆ ಕಾರಣರಾದ ಆಟೋ ಮತ್ತು ಟ್ರ್ಯಾಕ್ಟರ್ ಚಾಲಕನಿಗೆ ಶಿಕ್ಷೆ ಹಾಗೂ ದಂಡವಿಧಿಸಿ ನಗರದ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ತೀರ್ಪು ನೀಡಿದ್ದಾರೆ.

ಮುಜಾಮಿಲ್ ಪಾಷಾ ಮತ್ತು ಎನ್. ವಿಜಯಕುಮಾರ್ ಶಿಕ್ಷೆಗೊಳ ಗಾದವರು. 2006ರ ಮಾರ್ಚ್ 18 ರಂದು ಆಟೋ ಚಾಲಕ ಮುಜಾಮಿಲ್ ಪಾಷಾ ಎಂಬಾತ ಅಸ್ಮಾ ಫರೀನ್ ಮತ್ತು ಐಷಾ ಖಾನಂ ಅವರನ್ನು ಆಟೋದಲ್ಲಿ ಕೂರಿಸಿಕೊಂಡು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಕಡೆಯಿಂದ ಪಚ್ಚತ್ತವೃತ್ತದ ಕಡೆಗೆ ಅತಿವೇಗವಾಗಿ ಬಂದಿದ್ದಾರೆ. ಮುಂಭಾಗದಲ್ಲಿ ನಿಂತಿದ್ದ ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ಮರಳು ತುಂಬಿದ್ದ ಟ್ರ್ಯಾಕ್ಟರ್ ಟ್ರೈಲರ್‌ಗೆ ಆಟೋ ಡಿಕ್ಕಿ ಹೊಡೆದಿದೆ.

ಆಟೋ ಉರುಳಿದ ಪರಿಣಾಮ ಅಸ್ಮಾ ಫರೀನ್ ಮತ್ತು ಐಷಾ ಖಾನಂ ರಸ್ತೆಗೆ ಬಿದ್ದಿದ್ದಾರೆ. ಆ ವೇಳೆ ಟ್ರ್ಯಾಕ್ಟರ್ ಚಕ್ರ ಹರಿದು ಬಾಲಕಿ ಅಸ್ಮಾ ಫರೀನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಐಷಾ ಖಾನಂ ತೀವ್ರ ಗಾಯಗೊಂಡಿದ್ದರು. ಟ್ರ್ಯಾಕ್ಟರ್ ಚಾಲಕ ವಿಜಯಕುಮಾರ್ ಚಾಲನಾ ಪರವಾನಗಿ ಹೊಂದಿರಲಿಲ್ಲ.

ಈ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ರಾಧಾಕೃಷ್ಣ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುಜಾಮಿಲ್ ಪಾಷಾನಿಗೆ 2 ವರ್ಷ ಸಾದಾ ಸಜೆ ಮತ್ತು ವಿಜಯಕುಮಾರ್‌ಗೆ 3 ತಿಂಗಳು ಸಾದಾ ಸಜೆ ಮತ್ತು 500 ರೂ ದಂಡವಿಧಿಸಿ ತೀರ್ಪು ನೀಡಿದ್ದಾರೆ.

ಆಟೊ ಚಾಲಕನಿಗೆ ಶಿಕ್ಷೆ
ಸಮರ್ಪಕ ದಾಖಲೆ ಹಾಜರು ಪಡಿಸದೆ ಪ್ರಯಾಣಿಕರಿಂದಲೂ ಆಟೋ ದರ ಹೆಚ್ಚು ಪಡೆದ ಆಟೋ ಚಾಲಕ ಮಂಜುನಾಥ ಎಂಬಾತನಿಗೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯ 700 ರೂ ದಂಡ ವಿಧಿಸಿದೆ.

ಜ. 3ರಂದು ಪಟ್ಟಣ ಠಾಣೆ ಪಿಎಸ್‌ಐ ಜನಾರ್ದನ್ ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದ ಆಟೋವನ್ನು ತಡೆದು ಪರಿಶೀಲಿಸಲಾಯಿತು. ಚಾಲಕ ಮಂಜುನಾಥ ಸಮರ್ಪಕ ದಾಖಲೆ ಕೂಡ ಹಾಜರುಪಡಿಸಿಲ್ಲ. ಸಮವಸ್ತ್ರ ಕೂಡ ಧರಿಸಿರಲಿಲ್ಲ. ಅಲ್ಲದೇ, ಪ್ರಯಾಣಿಕರಿಂದಲೂ ಹೆಚ್ಚಿನ ದರ ಪಡೆದಿರುವ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು, ಆರೋಪಿಗೆ ದಂಡ ವಿಧಿಸಿದ್ದಾರೆ. ಈ ಎರಡು ಪ್ರಕರಣಗಳಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಎಂ.ಕೆ. ಪ್ರಫುಲ್ಲ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.