ADVERTISEMENT

ಅಭಿವೃದ್ಧಿ ವಂಚಿತ ಎಳೆಪಿಳ್ಳಾರಿ ದೇಗುಲ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 7:58 IST
Last Updated 10 ಜುಲೈ 2013, 7:58 IST

ಯಳಂದೂರು: ಅಭಿವೃದ್ಧಿ ಕಾಣದ ಕಲ್ಯಾಣಿ ಕೊಳ, ಶಿಥಿಲವಾಗಿರುವ ದೇಗುಲ, ಅರ್ಧಕ್ಕೆ ನಿಂತಿರುವ ಸಮುದಾಯಭವನದ ಕಾಮಗಾರಿ... ಇವು ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಎಳೆಪಿಳ್ಳಾರಿ ದೇಗುಲದ ಪ್ರಸ್ತುತ ಸ್ಥಿತಿ.

ಅನಾದಿ ಕಾಲದಿಂದಲೂ ಈ ದೇಗುಲಕ್ಕೆ ವಿಶೇಷವಾದ ಸ್ಥಾನವಿದ್ದು ಇಲ್ಲಿಯ ವಿನಾಯಕಸ್ವಾಮಿ ಸುತ್ತಮುತ್ತಲ ಹಾಗೂ ಹೊರ ಜಿಲ್ಲೆಗಳ ಅರಾಧ್ಯ ದೈವನಾಗಿದ್ದಾನೆ. ಪ್ರತಿನಿತ್ಯ ನೂರಾರು ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಆಗಾಗ ಉಚಿತ ಸಾಮೂಹಿಕ ವಿವಾಹಗಳೂ ಇಲ್ಲಿ ನಡೆಯುತ್ತವೆ.

ಈ ಉದ್ದೇಶದಿಂದಲೇ 2008-09 ನೇ ಸಾಲಿನಲ್ಲಿ ಅಂದಿನ ಜಿಲ್ಲಾ ಪಂಚಾಯಿತಿ ಸದಸ್ಯೆ ವಸಂತಾ ನಂಜುಂಡಸ್ವಾಮಿ ಅವರು ತಮ್ಮ ಅನುದಾನದಲ್ಲಿ ದೇಗುಲದ ಪಕ್ಕದಲ್ಲೇ ಸಮುದಾಯ ಭವನ ನಿರ್ಮಿಸಲು 2 ಲಕ್ಷ ರೂಪಾಯಿ ಅನುದಾನ ನೀಡಿದ್ದರು. ಆದರೆ ಇದರಲ್ಲಿ ಕಾಮಗಾರಿ ಪೂರ್ಣಗೊಳ್ಳಲಿಲ್ಲ.

2011-12ನೇ ಸಾಲಿನಲ್ಲಿ ಸಂಸದ ಆರ್. ಧ್ರುವನಾರಾಯಣ ತಮ್ಮ    ಅನುದಾನದಲ್ಲಿ ಮತ್ತೆ 2 ಲಕ್ಷ ರೂಪಾಯಿ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದರು.

ಆದರೆ ಭವನಕ್ಕೆ ಮೇಲ್ಛಾವಣಿ ಹಾಕಿರುವುದು ಬಿಟ್ಟರೆ ಇತರೆ ಯಾವುದೇ ಕಾಮಗಾರಿಗಳೂ ಇನ್ನೂ ಪೂರ್ಣಗೊಂಡಿಲ್ಲ. ಆಗಿರುವ ಕೆಲಸವೂ ಕಳಪೆ ಗುಣಮಟ್ಟ ದಿಂದ ಕೂಡಿದ್ದು, ಸರ್ಕಾರಿ ಅನುದಾನ ದುರುಪಯೋಗವಾಗಿದೆ ಎಂಬುದು ಇಲ್ಲಿನ ನಿವಾಸಿಗಳ ದೂರು.

ದೇಗುಲವೂ ತುಂಬಾ ಹಳೆಯದಾಗಿದ್ದು ಶಿಥಿಲವಾಗಿದೆ. ಸ್ಥಳೀಯ ಶಾಸಕರಾಗಿದ್ದ ಎಸ್. ಬಾಲರಾಜು ಪಕ್ಕದಲ್ಲೇ ಇರುವ ಕಲ್ಯಾಣಿ ಕೊಳವನ್ನು ಅಭಿವೃದ್ಧಿಗೊಳಿಸುವ ಯೋಜನೆಗೆ ಕೈಹಾಕಿದ್ದರೂ ಕೇವಲ ಕಾಂಕ್ರೀಟ್ ಬೆಂಚ್‌ಗಳನ್ನು ಹಾಕಿರುವುದು ಬಿಟ್ಟರೆ ಇನ್ನಾವುದೇ ಕಾಮಗಾರಿ ನಡೆದಿಲ್ಲ. ಈಗಲಾದರೂ ಸಮುದಾಯ ಭವನ ಸೇರಿದಂತೆ ದೇಗುಲದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿ ಎಂದು ಗ್ರಾಮಸ್ಥರಾದ ಚಕ್ರವರ್ತಿ, ಮಹದೇವಸ್ವಾಮಿ, ಮಂಜುನಾಥ ಮುಂತಾದವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.