ADVERTISEMENT

ಆನೆ ದಾಳಿಗೆ ವ್ಯಕ್ತಿ ಬಲಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 10:25 IST
Last Updated 14 ಜೂನ್ 2013, 10:25 IST

ಚಾಮರಾಜನಗರ: ಸೌದೆ ತರಲು ಕಾಡಿಗೆ ತೆರಳಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗಡಿಭಾಗದ ಪುಣಜನೂರು ಬಳಿಯ ಶ್ರೀನಿವಾಸಪುರ ಕಾಲೊನಿಯಲ್ಲಿ (ಬಂಡ್ರಳ್ಳಿ ಪೋಡು) ನಡೆದಿದೆ.

ಕುಂಬೇಗೌಡ (56) ಮೃತಪಟ್ಟವರು. ಬುಧವಾರ ಕಾಡಿಗೆ ಸೌದೆ ತರಲು ತೆರಳಿದ್ದರು. ಮನೆಯತ್ತ ವಾಪಸ್ ಬರುತ್ತಿದ್ದ ವೇಳೆ ಆನೆಯೊಂದು ಅವರ ಮೇಲೆ ದಾಳಿ ನಡೆಸಿದೆ. ಕುಂಬೇಗೌಡ ಮನೆಗೆ ಬಾರದಿದ್ದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಕುಟುಂಬದ ಸದಸ್ಯರು ಪರಿಶೀಲನೆ ನಡೆಸಿದ ವೇಳೆ ಶಿವನೇಗೌಡ ಎಂಬುವರ ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ.

`ಕುಂಬೇಗೌಡ ಸೌದೆಗಾಗಿ ಕಾಡಿಗೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮೃತದೇಹದ ಅಕ್ಕಪಕ್ಕದಲ್ಲಿ ಸೌದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದೇಹದಲ್ಲಿ ಸಲಗವೊಂದು ದಂತದಿಂದ ತಿವಿದಿರುವ ಗುರುತುಗಳಿವೆ' ಎಂದು ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ (ಬಿಆರ್‌ಟಿ) ಪುಣಜನೂರು ವಲಯ ಅರಣ್ಯಾಧಿಕಾರಿ ಮಹಮ್ಮದ್ ಮುಜಾಮಿಲ್ `ಪ್ರಜಾವಾಣಿ'ಗೆ ತಿಳಿಸಿದರು.

ರೂ 2 ಲಕ್ಷ ಪರಿಹಾರ: ಸುದ್ದಿ ತಿಳಿದ ತಕ್ಷಣ ಶಾಸಕ ಸಿ. ಪುಟ್ಟರಂಗಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮೃತನ ಪತ್ನಿ ಸಿದ್ದಮ್ಮ ಅವರಿಗೆ ಸ್ಥಳದಲ್ಲಿಯೇ ಅರಣ್ಯ ಇಲಾಖೆಯಿಂದ ನೀಡುವ 2 ಲಕ್ಷ ರೂಪಾಯಿ ಮೊತ್ತದ ಪರಿಹಾರಧನದ ಚೆಕ್ ವಿತರಿಸಿದರು.

ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಅನುಪಮಾ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ರವಿಕುಮಾರ್, ಮುಖಂಡರಾದ ಸೋಮಲಿಂಗಪ್ಪ, ಉಲ್ಲೆೀಶ್ ನಾಯಕ, ಶಿವನಾಯಕ, ಕುಮಾರ್‌ನಾಯಕ್, ನಾಗನಾಯಕ್, ಜಡಿಯಪ್ಪ, ದೊರೆಸ್ವಾಮಿ, ಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.