ADVERTISEMENT

ಆರೋಗ್ಯ ವೃದ್ಧಿಗೆ ಶಿಕ್ಷಣ ಅಗತ್ಯ: ನರಸಿಂಹಮೂರ್ತಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:55 IST
Last Updated 24 ಸೆಪ್ಟೆಂಬರ್ 2013, 6:55 IST

ಚಾಮರಾಜನಗರ: ‘ಶಾಲೆಗಳಲ್ಲಿ ಯೋಗ ಶಿಕ್ಷಣ ಜಾರಿಗೊಳಿಸುವುದರಿಂದ ಮಕ್ಕಳ ಆರೋಗ್ಯ ವೃದ್ಧಿಸುತ್ತದೆ. ಜತೆಗೆ, ಏಕಾಗ್ರತೆ ಕೂಡ ಹೆಚ್ಚುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ ಹೇಳಿದರು.

ನಗರಕ್ಕೆ ಸಮೀಪದ ಮರಿಯಾಲದ ಜೆಎಸ್ಎಸ್ ರುಡ್‌ಸೆಟ್‌ನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕೊಳ್ಳೇಗಾಲ ತಾಲ್ಲೂಕಿನ ಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಯೋಗ ಪ್ರಶಿಕ್ಷಣ ಶಿಬಿರದಲ್ಲಿ ಮಾತನಾಡಿದರು.

ಶಿಕ್ಷಕರಿಗೆ ಯೋಗ ಶಿಕ್ಷಣ ನೀಡುವುದರಿಂದ ಮುಂದಿನ ತಲೆಮಾರಿಗೂ ಕೂಡ ಅನುಕೂಲವಾಗಲಿದೆ. ಹೆಚ್ಚಾಗಿ ಆಯುಷ್ ಆಸ್ಪತ್ರೆಗಳನ್ನು ಸ್ಥಾಪಿಸಬೇಕು ಎಂದರು.

ಆಹಾರದ ಕಲಬೆರಕೆಯಿಂದ ಮನುಷ್ಯನಿಗೆ ಕಾಯಿಲೆ ಹೆಚ್ಚುತ್ತಿವೆ. ರೈತರು ಸಾವಯವ ಕೃಷಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕಿದೆ ಎಂದ ಅವರು, ಮನುಷ್ಯನಿಗೆ ಆರಾಮದಾಯಕ ಜೀವನ ಬೇಕಾಗಿದೆ. ಹೀಗಾಗಿ, ಜೀವನ ಯಾಂತ್ರಿಕವಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಮ್ಮ ಮಾತನಾಡಿ,  ಶಿಕ್ಷಕರು ಯೋಗ ಕಲಿತು ಬೇರೆಯವರಿಗೂ ಕಲಿಸಬೇಕು. ಜತೆಗೆ, ಶಾಲಾ ಮಕ್ಕಳಿಗೂ ಕಲಿಸಬೇಕು ಎಂದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಕೆ.ಜೆ. ಜವರಪ್ಪ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪಿ. ಪುನೀತ್ ಬಾಬು, ಜಾರ್ಜ್ ಫಿಲಿಫ್, ಜೆಎಸ್ಎಸ್ ರುಡ್‌ಸೆಟ್ ಯೋಜನಾಧಿಕಾರಿ ಚಂದ್ರಶೇಖರ್, ಗಣಪತಿ ಭಟ್, ಬಿ. ಚಿನ್ನಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.