ADVERTISEMENT

ಉತ್ತಮ ಸಾಹಿತ್ಯಕ್ಕೆ ಶುದ್ಧ ಮನಸ್ಸೇ ಸ್ಫೂರ್ತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 8:00 IST
Last Updated 2 ಅಕ್ಟೋಬರ್ 2012, 8:00 IST

ಚಾಮರಾಜನಗರ: `ಮನಸ್ಸು ಭ್ರಷ್ಟವಾದರೆ ನಾವು ರಚಿಸುವಂತಹ ಸಾಹಿತ್ಯ ಕೂಡ ಭ್ರಷ್ಟವಾಗುತ್ತದೆ. ಹಾಗಾಗಿ, ಮನಸ್ಸು ಶುದ್ಧತೆಯಿಂದ ಕೂಡಿರಬೇಕು. ಆಗ ಮಾತ್ರ ಉತ್ತಮ ಸಾಹಿತ್ಯ ರಚನೆಯಾಗುತ್ತದೆ~ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ ಹೇಳಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಆರಂಭವಾದ ಯಜಮಾನ್ ಶ್ರೀದೊಡ್ಡಯ್ಯ ದತ್ತಿ ಸಾಹಿತ್ಯ ಸಪ್ತಾಹ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಅವರು `ಕನ್ನಡ ಸಾಹಿತ್ಯ~ ವಿಷಯ ಕುರಿತು ಮಾತನಾಡಿದರು.

ವರ್ತಮಾನದ ಬದುಕು ಸೃಜನಶೀಲತೆಯಲ್ಲಿ ಅಡಕವಾಗಿರುವಾಗ ಮಾಹಿತಿ ಎನ್ನುವುದು ಭೂತಕಾಲದ ವಿಷಯವಾಗಿರುತ್ತದೆ ಎಂದ ಅವರು, ಸೃಜನಶೀಲ ಸಾಹಿತ್ಯ ಉತ್ತಮ ಬದುಕನ್ನು ರೂಪಿಸುತ್ತದೆ ಎಂದರು.

`ಮನುಷ್ಯನ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಂಡು ಬದುಕುವಂತಹ ಬಂಡವಾಳಶಾಹಿ ಗಳಿಗೆ ಶರಣಾಗಬಾರದು. ಬದುಕಿನ ಎಲ್ಲ ರಂಗದಲ್ಲೂ ಒಳ್ಳೆಯದೇ ಗೆಲ್ಲಬೇಕು ಎಂಬ ಆಶಯ ಹೊಂದಬೇಕು. ಈ ಹಾದಿಯಲ್ಲಿಯೇ ಸಮಾಜದ ಕೆಡಕುಗಳ ವಿರುದ್ಧ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಜೀವನ ಕಷ್ಟಕರವಾಗುತ್ತದೆ ಎಂದು ವಿಶ್ಲೇಷಿಸಿದರು.

ಪುಸ್ತಕಗಳಿಗಿಂತಲೂ ಉತ್ತಮ ಸ್ನೇಹಿತರಿಲ್ಲ ಎಂಬುದನ್ನು ಮರೆಯಬಾರದು. ನಮ್ಮಲ್ಲಿನ ಭಾವನೆಗಳ ಸಂಕೀರ್ಣತೆ ಹೆಚ್ಚಾದಾಗ ಮಾತ್ರ ಧ್ವನಿಸುವ ಸಾಹಿತ್ಯದ ಸಾಲುಗಳ ಆಯಾಮವೂ ವೃದ್ಧಿಯಾಗುತ್ತದೆ ಎಂದರ.

ಹಿರಿಯ ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, `ಓದುವ ಅಭಿರುಚಿ ಕಡಿಮೆಯಾದರೆ ನಷ್ಟ ಕಟ್ಟಿಟ್ಟಬುತ್ತಿ. ಹಾಗಾಗಿ, ಉತ್ತಮ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬದುಕಿನ ಎಲ್ಲ ಸಂಕೀರ್ಣತೆಗಳನ್ನು ಅರ್ಥಮಾಡಿಕೊಂಡು ತೋರಿಸುವಂತಹ ಕೃತಿಯು ಅತ್ಯುತ್ತಮವಾಗಿರುತ್ತದೆ. ಓದಿನಲ್ಲೂ ಉತ್ತಮ ರಂಜನೆ ಸಿಗುತ್ತದೆ~ ಎಂದು ಹೇಳಿದರು.
 
ಎಸ್‌ಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಉದ್ಘಾ ಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಪಿ. ದೇವರಾಜು, ದಲಿತ ಮುಖಂಡ ವೆಂಕಟರಮಣ ಸ್ವಾಮಿ(ಪಾಪು), ಡಾ.ಕೃಷ್ಣಮೂರ್ತಿ ಚಮರಂ, ಫರತ್ ಉಲ್ಲಾ, ಶಿವಕುಮಾರ್ ಕೆಂಪನಪುರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.