ADVERTISEMENT

ಉದ್ಯೋಗ ಖಾತ್ರಿ: ರಾಜ್ಯಕ್ಕೆ ರೂ1,688 ಕೋಟಿ ಖೋತ

ಪ್ರಜಾವಾಣಿ ವಿಶೇಷ
Published 2 ಮಾರ್ಚ್ 2012, 7:30 IST
Last Updated 2 ಮಾರ್ಚ್ 2012, 7:30 IST

ಚಾಮರಾಜನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಎನ್‌ಆರ್‌ಇಜಿ)ಯಡಿ ಲಭ್ಯಇರುವ ಹಣ ಸದ್ಬಳಕೆಯಾಗದಿರುವ ಪರಿಣಾಮ 2011-12ನೇ ಸಾಲಿನಲ್ಲಿ ರಾಜ್ಯಕ್ಕೆ 1,688 ಕೋಟಿ ರೂ ಅನುದಾನ ಕಡಿಮೆಯಾಗಿದೆ!

2011-12ನೇ ಸಾಲಿನಲ್ಲಿ ಈ ಯೋಜನೆಯಡಿ ಕರ್ನಾಟಕಕ್ಕೆ 4,100 ಕೋಟಿ ರೂ ಅನುದಾನ ನಿಗದಿಯಾಗಿತ್ತು. ಆದರೆ, ಪ್ರತಿ ಜಿಲ್ಲೆಯಲ್ಲೂ ತಿಂಗಳವಾರು ಅನುದಾನ ಖರ್ಚಾಗಿರುವ ಪ್ರಮಾಣ ಆಧರಿಸಿ ಕಾರ್ಮಿಕ ಮುಂಗಡ ಪತ್ರದ ಆಯವ್ಯಯವನ್ನು 2,412 ಕೋಟಿ ರೂಪಾಯಿಗೆ ಪರಿಷ್ಕರಿಸಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಜತೆಗೆ, ಯೋಜನೆಯಡಿ ಸೃಜಿಸಬೇಕಿರುವ ಮಾನವ ದಿನಗಳು ಹಾಗೂ ಉದ್ಯೋಗ ಒದಗಿಸಬೇಕಿರುವ ಕುಟುಂಬಗಳ ಸಂಖ್ಯೆ ನಿಗದಿಪಡಿಸಿ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುವಂತೆ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಯೋಜನೆಯ ರಾಜ್ಯ ನಿರ್ದೇಶಕರು ಸುತ್ತೋಲೆ ರವಾನಿಸಿದ್ದಾರೆ.  

ಆರ್ಥಿಕ ವರ್ಷದ ಆರಂಭದಲ್ಲಿಯೇ ಗ್ರಾಮ ಸಭೆ ನಡೆಸಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಜತೆಗೆ, ಮೊದಲ ಹಂತದಲ್ಲಿ ಆರು ತಿಂಗಳಿಗಷ್ಟೇ ಕ್ರಿಯಾಯೋಜನೆ ರೂಪಿಸಲು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಆದೇಶಿಸಲಾಗಿತ್ತು. ಅದರನ್ವಯ ಮೊದಲ 6 ತಿಂಗಳ ಅವಧಿಯಲ್ಲಿ ಜಿಲ್ಲೆವಾರು ಬಳಕೆಯಾಗಿರುವ ಅನುದಾನ ಆಧರಿಸಿ ಉಳಿದ ಅವಧಿಗೆ ಈಗ ಅನುದಾನ ಪರಿಷ್ಕರಿಸಿ ಬಿಡುಗಡೆಗೊಳಿಸಲಾಗಿದೆ.

ಹೀಗಾಗಿ, 2011ರ ಏಪ್ರಿಲ್‌ನಿಂದಲೇ ಕಾಮಗಾರಿಗಳಿಗೆ ಚಾಲನೆ ನೀಡಲು ಹಿಂದೇಟು ಹಾಕಿರುವ ಜಿಲ್ಲೆಗಳಿಗೆ ಕೋಟ್ಯಂತರ ರೂ ಅನುದಾನ ಖೋತ ಆಗಿದೆ. ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಗುಲ್ಬರ್ಗ, ಕೋಲಾರ, ರಾಯಚೂರು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗೆ ಮಾತ್ರವೇ ಲಭಿಸಿರುವ ಅನುದಾನ 100 ಕೋಟಿ ರೂ ಮೀರಿದೆ. ಉಳಿದ ಜಿಲ್ಲೆಗಳಿಗೆ ಕಡಿಮೆ ಅನುದಾನ ಲಭಿಸಿದೆ.

ಉದ್ಯೋಗ ಖಾತ್ರಿ ಯೋಜನೆಯಡಿಯೇ ಲಭ್ಯವಿರುವ ಅನುದಾನ ಬಳಸಿಕೊಂಡು ಬರಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳುವಂತೆಯೂ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ. ಹೀಗಾಗಿ, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಯೋಜನೆಯಡಿ ಈಗ ಅನುದಾನವೂ ಕಡಿಮೆಯಾಗಿರುವುದು ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

`ಆರ್ಥಿಕ ವರ್ಷದ ಆರಂಭದಿಂದಲೇ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲಿಲ್ಲ. ಕೆಲವು ಜಿಲ್ಲೆಗಳಲ್ಲಿ ಜೂನ್-ಜುಲೈ ತಿಂಗಳಿನಲ್ಲಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕಾಮಗಾರಿಗಳಿಗೆ ಅನುಮೋದನೆ ನೀಡಲು ವಿಳಂಬವಾಗಿದೆ. ಇದರ ಪರಿಣಾಮ ಮೊದಲ ಆರು ತಿಂಗಳ ಅವಧಿಯಲ್ಲಿ ಪ್ರಗತಿ ಕುಂಠಿತಗೊಂಡಿದೆ. ಜತೆಗೆ, ಸರ್ಕಾರದ ವರ್ಗಾವಣೆ ನೀತಿ ಯೋಜನೆಯ ಪ್ರಗತಿಗೆ ಮಾರಕವಾಗಿದೆ~ ಎಂದು ಎಂಎನ್‌ಆರ್‌ಇಜಿ ರಾಷ್ಟ್ರೀಯ ಸಲಹಾ ಸಮಿತಿ ಸದಸ್ಯ ಹಾಗೂ ಸಂಸದ ಆರ್. ಧ್ರುವನಾರಾಯಣ `ಪ್ರಜಾವಾಣಿ~ಗೆ ತಿಳಿಸಿದರು.

`ಉದ್ಯೋಗ ಖಾತ್ರಿ ಯೋಜನೆಯ ರಾಜ್ಯ ನಿರ್ದೇಶಕರು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳ ವರ್ಗಾವಣೆಯಲ್ಲಿ ಸರ್ಕಾರದಿಂದ ನಿರ್ದಿಷ್ಟ ಮಾನದಂಡ ಪಾಲನೆಯಾಗಲಿಲ್ಲ. ಇದರ ಪರಿಣಾಮ ಯೋಜನೆಯ ನಿರ್ವಹಣೆಗೆ ತೊಡಕಾಯಿತು. ಹೀಗಾಗಿ, ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ~ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.