ADVERTISEMENT

`ಎಚ್‌ಐವಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:27 IST
Last Updated 20 ಡಿಸೆಂಬರ್ 2012, 8:27 IST

ಚಾಮರಾಜನಗರ: `ಏಡ್ಸ್ ಹಾಗೂ ಎಚ್‌ಐವಿ ಸೋಂಕಿತರು ಆಘಾತಕ್ಕೆ ಒಳಗಾಗದೆ ಸಮಾಜದೊಟ್ಟಿಗೆ ಬೆರೆತು ಮುಕ್ತಜೀವನ ನಡೆಸಬೇಕು. ಈ ನಿಟ್ಟಿನಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ' ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವಿ.ಜಿ. ಸಾವಡಕರ್ ಹೇಳಿದರು.

ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಹಿಂಭಾಗದ ಎಎನ್‌ಎಂ ತರಬೇತಿ ಕೇಂದ್ರದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಇತರೇ ಸಂಘ-ಸಂಸ್ಥೆಗಳಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೂಕ್ತ ವೈದ್ಯಕೀಯ ಚಿಕಿತ್ಸೆ ಮೂಲಕ ಎಚ್‌ಐವಿ ಸೋಂಕು ಹೆಚ್ಚಾಗುವುದನ್ನು ನಿಯಂತ್ರಿಸಬಹುದು. ಇದನ್ನು ಅರಿತು ಸೋಂಕಿತರು ಕೂಡ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಎನ್. ಜಯರಾಂ ಮಾತನಾಡಿ, `ಎಚ್‌ಐವಿ ಸೋಂಕಿತರನ್ನು ದೂರ ಸರಿಸುವಂತಹ ಕಾಲವಿತ್ತು. ಪ್ರಸ್ತುತ ಸಮಾಜದಲ್ಲಿ ಅನೇಕ ಬದಲಾವಣೆಗಳಾಗಿವೆ. ಆದರೆ, ಗ್ರಾಮೀ ಣರಲ್ಲಿ ಸೋಂಕಿತರನ್ನು ಕೀಳಾಗಿ ಕಾಣುವ ಮನೋಭಾವ ಪೂರ್ಣ ಪ್ರಮಾಣದಲ್ಲಿ ದೂರವಾಗಿಲ್ಲ. ಗ್ರಾಮೀಣರಿಗೆ ಎಚ್‌ಐವಿ ಸೋಂಕು ತಡೆಗಟ್ಟುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಆಧುನಿಕಯುಗದ ವೈದ್ಯಕೀಯ ಚಿಕಿತ್ಸೆ ಹಾಗೂ ಸರ್ಕಾರದ ಉಚಿತ ಸೌಲಭ್ಯ ಪಡೆದು ಏಡ್ಸ್ ಹಾಗೂ ಎಚ್‌ಐವಿ ಸೋಂಕು ತಡೆಗಟ್ಟಲು ಎಲ್ಲರೂ ಪಣತೊಡಬೇಕು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸಮೂರ್ತಿ ಮಾತನಾಡಿ, `ಎಚ್‌ಐವಿ ಸೋಂಕಿತರು ಮತ್ತು ಸಾರ್ವಜನಿಕರ ನಡುವೆ ಸ್ಪಂದನೆಯ ಕೊರತೆಯಿದೆ. ಹೀಗಾಗಿ, ಸೋಂಕಿತರು ಸಮಾಜದಿಂದ ದೂರ ಉಳಿಯುವಂತಾಗಿದೆ. ಏಡ್ಸ್ ಮಾರಕ ರೋಗ ಎಂದು ಸಮಾಜವೇ ಹಣೆಪಟ್ಟಿ ಕಟ್ಟಿದೆ. ಸೋಂಕಿತರೊಂದಿಗೆ  ಸಾಮರಸ್ಯದಿಂದ ಇದ್ದರೆ ಈ ಹಣೆಪಟ್ಟಿಯಿಂದ ದೂರ ಸರಿಯಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ಸೋಮಶೇಖರಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್. ಗಂಗಣ್ಣನವರ್, ವಕೀಲರ ಸಂಘದ ಉಪಾಧ್ಯಕ್ಷ ಪುಟ್ಟರಾಜು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶೇಹೆರ್‌ಬಾನು, ರಕ್ತನಿಧಿ ವೈದ್ಯಾಧಿಕಾರಿ ಡಾ.ಸುಜಾತಾ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಸ್. ಮಹದೇವ್, ಡಾ.ಜಯಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.