ADVERTISEMENT

ಎಸ್‌ಎಸ್‌ಎಲ್‌ಸಿ: ಉತ್ತಮ ಫಲಿತಾಂಶಕ್ಕೆ ಹೊಸ ಸೂತ್ರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 4:35 IST
Last Updated 11 ಸೆಪ್ಟೆಂಬರ್ 2011, 4:35 IST

ಯಳಂದೂರು: ಇದು ಸಾಧ್ಯ ಎಂದರೆ ಸಾಧ್ಯ, ಇಲ್ಲದಿದ್ದರೆ....? ನೀವೇ ಆಲೋಚಿಸಿ.
ಹೀಗೆನ್ನುತ್ತಾರೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು. ಉಳಿದಿರುವ 198 ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಜಿಲ್ಲೆಯನ್ನು 10ನೇ ಸ್ಥಾನಕ್ಕೇರಿಸಲು ಶಿಕ್ಷಕ ಸಮುದಾಯ ಯೋಜನೆ ರೂಪಿಸಿಕೊಳ್ಳಬೇಕು. ಕಲಿಕೆಯ ಮಟ್ಟ ಮೇಲು ಸ್ತರದಲ್ಲಿರಬೇಕು. ಮಕ್ಕಳ ಸಾಧನೆಗೆ ಪೋಷಕರ ಪಾಲ್ಗೊಳ್ಳುವಿಕೆಯೂ ಇರಬೇಕು. ಹಾಗಾದಾಗ ಮಾತ್ರ ಕ್ರಿಯಾತ್ಮಕ ಆಡಳಿತದಲ್ಲಿ ಗುಣಮಟ್ಟದ ಶಿಕ್ಷಣ ಸಾಧ್ಯವಾಗುತ್ತದೆ. ಉತ್ತಮ ಫಲಿತಾಂಶ ಸಾಧನೆಗೆ ಶಿಕ್ಷಣ ಇಲಾಖೆ ತಾಲ್ಲೂಕುವಾರು `ಡಿಆರ್‌ಜಿ~ಗಳ ಮೂಲಕ ತರಬೇತಿ ಆಯೋಜಿಸಿದೆ.

ಶಿಕ್ಷಕ ದಿನಾಚರಣೆಗೆ ಅರ್ಥ ಬರಲು ಪಾಲಕ, ಶಿಕ್ಷಕ, ಕಲಿಕಾರ್ಥಿಯ ಪಾಲ್ಗೊಳ್ಳುವಿಕೆಯೂ ಮುಖ್ಯ. `ಪರೀಕ್ಷೆಯನ್ನು ವಿದ್ಯಾರ್ಥಿಗಳು ಸಂಭ್ರಮದಿಂದ ಬರೆಯಬೇಕು. ಪರೀಕ್ಷೆಯನ್ನು ಹಬ್ಬ ಎಂದು ತಿಳಿದು ಮಕ್ಕಳನ್ನು ಸಜ್ಜುಗೂಳಿಸಬೇಕು~ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಬೆಳ್ಳಶೆಟ್ಟಿ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರೊಡನೆ ನಡೆಸಿದ ಸಂವಾದದಲ್ಲಿ ತಿಳಿಸಿದ್ದಾರೆ.
|
ತಾಲ್ಲೂಕಿನಲ್ಲಿ ಮೊದಲ ಸುತ್ತಿನ ಆಪ್ತ ಸಮಾಲೋಚನೆ ಮುಗಿದಿದೆ. ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಸಬೇಕು. ನೀಲನಕ್ಷೆಗೆ ಅನುಗುಣವಾಗಿ ಪ್ರಶ್ನೆ ಪತ್ರಿಕೆಯೂ ಮಕ್ಕಳ ಕೈ ಸೇರಬೇಕು. ಇದಕ್ಕಾಗಿ ಕಿರು ಹಾಗೂ ಅರ್ಧ ವಾರ್ಷಿಕ ಸರಣಿ ಪರೀಕ್ಷೆಗಳಿಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಿರು ಕೈಪಿಡಿ ತಿಳಿಸುತ್ತದೆ.

ಮುಕ್ತ ವಾತಾವರಣದಲ್ಲಿ ಮಕ್ಕ ಳೊಡನೆ ಬೆರೆಯಲು `ಪಿಕ್ನಿಕ್ ಫಜಲ್~, ನಿಧಾನ ಕಲಿಕೆಯವರಿಗೆ ವಿಶ್ವಾಸ ತುಂಬಲು `ಥಿಂಕ್ ಟ್ಯಾಂಕ್~, ಬರವಣಿಗೆ ಸ್ಫುಟಗೊಳ್ಳಲೂ `ಚಿಕ್ಕೋಡಿ ಟೆಕ್ನಿಕ್~ ಅಳವಡಿಕೆ ಅನಿವಾರ್ಯ ಎನ್ನುತ್ತದೆ ಶಿಕ್ಷಕ ವಲಯ. `ಪ್ರತಿದಿನ 20 ಪುಟಗಳ ಶುದ್ಧ ಬರಹ ಬರೆಯುವುದು, ಧನಾತ್ಮಕ ಚಿಂತನೆ ರೂಪಿಸಲು ಯೋಗ, ಧ್ಯಾನ, ಆರೋಗ್ಯ, ಮೌಲ್ಯ ಹಾಗೂ ಅಂಗ ಸಾಧನೆಗೆ ಅನುವು, ಮಕ್ಕಳೊಡನೆ ಆಪ್ತ ಸಂವಾದ ಹಮ್ಮಿಕೊಂಡಿದ್ದೇವೆ~ ಎನ್ನುತ್ತಾರೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಕುಮಾರ್.

 ಪ್ರತಿ ಶಾಲೆಯೂ ಶೇ 100 ಫಲಿತಾಂಶ ಪಡೆಯಲು ಶೇ 60ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಶೇ 60ಕ್ಕಿಂತ ಹೆಚ್ಚು ಅಂಕ ಪಡೆಯಬೇಕು. ತರಗತಿಯಲ್ಲಿ ಸಾಂಪ್ರದಾಯಿಕ `ಚಾಕ್, ಟಾಕ್, ವಾಕ್~ ಬೋಧನೆಗೆ ಬದಲಾಗಿ ಹೊಸ ಮಾದರಿಯ ಕಲಿಕಾ ತಂತ್ರ ಬಳಸಿ ಕಲಿಸುವಂತಾಗಬೇಕು. ಪಠ್ಯವನ್ನು ಮಕ್ಕಳೇ ಓದುವಂತಾಗಬೇಕು.

ಪುನರ್‌ಮನನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜನವರಿ ತಿಂಗಳಲ್ಲಿ ಅರ್ಥಪೂರ್ಣ ಕಲಿಕೆ ಮುಗಿಯುವಂತೆ ವಾರ್ಷಿಕ ಯೋಜನೆ ಆಯೋಜಿಸಬೇಕು. ವಿಶೇಷ ತರಗತಿಗಳು ಹೊಸ ಪಾಠ ಮಾಡುವ ಅವಧಿಯಲ್ಲಿ ಈಗಾಗಲೇ ಕಲಿತ ಪಾಠಗಳ ಸ್ವ ಅಧ್ಯಯನಕ್ಕೆ ನೆರವು ನೀಡುತ್ತದೆ ಎನ್ನುತ್ತಾರೆ ಉಪ ನಿರ್ದೇಶಕರು.

ಸಾಂಪ್ರದಾಯಿಕ ಕಲಿಕೆಗೆ ಬದಲಾಗಿ ಕಂಪ್ಯೂಟರ್ ಮೂಲಕ ಸಿಡಿ, ಎಲ್‌ಸಿಡಿ, ಆಡಿಯೂ, ದಿನಪತ್ರಿಕೆ, ರೇಡಿಯೋ ಮೂಲಕ ಕಲಿಕೆ ಸುಲಭಗೊಳಿಸುವುದು. ರಾತ್ರಿ ಬೋಧನೆ, ದೀರ್ಘ ಗೈರು ಹಾಜರಿ ತಪ್ಪಿಸಲೂ ಪಾಲಕರ ಸಹಕಾರ ಅಗತ್ಯವಾಗಿದೆ.

ತಾಲ್ಲೂಕಿನಲ್ಲಿ ಸರ್ಕಾರಿ 6, ಅನುದಾನಿತ 4, ಅನುದಾನ ರಹಿತ 8 ಒಟ್ಟು 18 ಪ್ರೌಢಶಾಲೆಗಳಿವೆ. 2 ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದೆ. ಶೇ 100 ಫಲಿತಾಂಶ ದಾಖಲಿಸುವ ಹಿನ್ನೆಲೆಯಲ್ಲಿ ಗುಣಚಿಂತನಾ ಸಿದ್ಧತೆ ನಡೆಸಿದ್ದಾರೆ.

ಈ ಬಾರಿ ಶೇ 93.71 ಫಲಿತಾಂಶ ದಾಖಲಾಗಿದೆ. ಪ್ರಸಕ್ತ ಸಾಲಿನಲ್ಲಿ 932 ವಿದ್ಯಾರ್ಥಿಗಳು ಶೇ 100 ಫಲಿತಾಂಶ ದಾಖಲಿಸಲು ಸಿದ್ಧತೆ ನಡೆದಿದೆ. ಮಕ್ಕಳು ಪಡೆದ ಗ್ರೇಡ್‌ಗೆ ಅನುಗುಣವಾಗಿ ವಿಶೇಷ ತರಗತಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಮಂಜುನಾಥ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.