ADVERTISEMENT

ಎಸ್‌ಎಸ್‌ಎಲ್‌ಸಿ: ಜಿಲ್ಲೆಗೆ ಶೇ 77 ಫಲಿತಾಂಶ:28ನೇ ಸ್ಥಾನಕ್ಕೆ ಕುಸಿತ

​ಪ್ರಜಾವಾಣಿ ವಾರ್ತೆ
Published 18 ಮೇ 2012, 8:30 IST
Last Updated 18 ಮೇ 2012, 8:30 IST

ಚಾಮರಾಜನಗರ: ಕಳೆದ ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗಡಿ ಜಿಲ್ಲೆಗೆ ಶೇ. 77ರಷ್ಟು ಫಲಿತಾಂಶ ಲಭಿಸಿದ್ದು, 28ನೇ ಸ್ಥಾನಕ್ಕೆ ಕುಸಿದಿದೆ.ಕಳೆದ ಸಾಲಿನಲ್ಲಿ ಶೇ. 79.34ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಯು 18ನೇ ಸ್ಥಾನ ಪಡೆದಿತ್ತು. ಈ ಬಾರಿ ಫಲಿತಾಂಶವೂ ಕಡಿಮೆಯಾಗಿದ್ದು, ಜಿಲ್ಲಾವಾರು ಸ್ಥಾನದಲ್ಲೂ ಇಳಿಕೆ ಕಂಡಿದೆ.

ಪರೀಕ್ಷೆಗೆ ಹೊಸದಾಗಿ, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 10,746 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ 5,300 ಬಾಲಕರು ಹಾಗೂ 5,446 ಬಾಲಕಿಯರು ಇದ್ದರು. ಒಟ್ಟು 8,274 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
 
ತೇರ್ಗಡೆಯಾದವರ ಪೈಕಿ 3,882 ಬಾಲಕರು, 4,392 ಬಾಲಕಿಯರು ಸೇರಿದ್ದಾರೆ. ಒಟ್ಟಾರೆ ಶೇ. 77ರಷ್ಟು ಫಲಿತಾಂಶ ಜಿಲ್ಲೆಗೆ ಲಭಿಸಿದ್ದು, ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ ಶೇ. 2.34ರಷ್ಟು ಕಡಿಮೆಯಾಗಿದೆ.

ಈ ಬಾರಿ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದಿದ್ದರು. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರ ಫಲಿತಾಂಶ ಶೇ. 80.64ರಷ್ಟಿದೆ. ಬಾಲಕರ ಫಲಿತಾಂಶ ಶೇ. 73.24ರಷ್ಟಿದೆ. ಒಟ್ಟಾರೆ ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳು ಶೇ. 7.76ರಷ್ಟು ಹೆಚ್ಚು ಫಲಿತಾಂಶ ಪಡೆಯುವ ಮೂಲಕ ಮುನ್ನಡೆ ಸಾಧಿಸಿದ್ದಾರೆ.

ವರ್ಗವಾರು ಫಲಿತಾಂಶ ಅವಲೋಕಿಸಿದಾಗ ಪರಿಶಿಷ್ಟ ಜಾತಿ- ಶೇ. 74.04, ಪರಿಶಿಷ್ಟ ಪಂಗಡ- ಶೇ 73.49 ಹಾಗೂ ಶೇ. 79.89ರಷ್ಟು ಪ್ರವರ್ಗ-1ರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇತರೇ ವರ್ಗದ ಶೇ. 78.89ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ವಿಷಯವಾರು ಫಲಿತಾಂಶದಲ್ಲಿ ಪ್ರಥಮ ಭಾಷೆ- ಶೇ. 87.03, ದ್ವಿತೀಯ ಭಾಷೆ- ಶೇ. 82.07, ತೃತೀಯ ಭಾಷೆ- ಶೇ. 92.21, ಗಣಿತ- ಶೇ. 85.73, ವಿಜ್ಞಾನ ವಿಷಯ- ಶೇ. 83.57 ಮತ್ತು ಸಮಾಜ ವಿಜ್ಞಾನದಲ್ಲಿ ಶೇ. 86.95ರಷ್ಟು ಫಲಿತಾಂಶ ಬಂದಿದೆ. ಎಲ್ಲ ವಿಷಯದಲ್ಲೂ ಶೇ. 80ಕ್ಕಿಂತ ಹೆಚ್ಚು ಫಲಿತಾಂಶ ಬಂದಿರುವುದು ವಿಶೇಷ. ಇದಕ್ಕಾಗಿ ಎಲ್ಲ ಶಿಕ್ಷಕರು ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೆಳ್ಳಶೆಟ್ಟಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 23 ಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ. ಇದರಲ್ಲಿ 6 ಸರ್ಕಾರಿ ಶಾಲೆ, 15 ಅನುದಾನರಹಿತ ಮತ್ತು 2 ಅನುದಾನಿತ ಶಾಲೆಗಳಿವೆ. ಜಿಲ್ಲೆಯ 9 ಶಾಲೆಗಳು ಶೇ. 40ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದಿವೆ. ಇವುಗಳಲ್ಲಿ 1 ಸರ್ಕಾರಿ ಶಾಲೆ, 2 ಅನುದಾನಿತ ಮತ್ತು 6 ಅನುದಾನರಹಿತ ಶಾಲೆಗಳಿವೆ. ಈ ಪೈಕಿ 2 ಅನುದಾನರಹಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.