ADVERTISEMENT

ಐಎವೈ ಪುನರಾರಂಭ: ಪ್ರತಿ ಗ್ರಾಪಂ.ಗೆ 35 ಮನೆ

ಪ್ರಜಾವಾಣಿ ವಿಶೇಷ
Published 2 ಆಗಸ್ಟ್ 2011, 9:05 IST
Last Updated 2 ಆಗಸ್ಟ್ 2011, 9:05 IST
ಐಎವೈ ಪುನರಾರಂಭ: ಪ್ರತಿ ಗ್ರಾಪಂ.ಗೆ 35 ಮನೆ
ಐಎವೈ ಪುನರಾರಂಭ: ಪ್ರತಿ ಗ್ರಾಪಂ.ಗೆ 35 ಮನೆ   

ಚಾಮರಾಜನಗರ: ಕೇಂದ್ರ ಸರ್ಕಾರದ ಇಂದಿರಾ ಆವಾಸ್ ಯೋಜನೆ(ಐಎವೈ) 2011-12ನೇ ಸಾಲಿನಡಿ ಪುನರಾರಂಭಗೊಂಡಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 35 ಮನೆಗಳಂತೆ ಜಿಲ್ಲೆಯ 120 ಗ್ರಾ.ಪಂ.ಗಳಿಗೆ ಒಟ್ಟು 4,200 ಮನೆ ಮಂಜೂರಾಗಿವೆ.

ಪ್ರಸ್ತುತ ನಾಲ್ಕು ತಾಲ್ಲೂಕಿನಲ್ಲಿ ಗ್ರಾಮ ಸಭೆ ಮೂಲಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಶೇ. 60ರಷ್ಟು ಪೂರ್ಣಗೊಂಡಿದೆ. ಬಾಕಿಯಿರುವ ಗ್ರಾ.ಪಂ. ವ್ಯಾಪ್ತಿ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡುವುದರೊಂದಿಗೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ. ನಿಗದಿತ ಅವಧಿಯೊಳಗೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಸಲ್ಲಿಸಲು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಯೋಜನೆಯಡಿ ಫಲಾನುಭವಿಯೇ ಮನೆ ನಿರ್ಮಿಸಿಕೊಳ್ಳಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 50 ಸಾವಿರ ರೂ ಅನುದಾನ ಲಭಿಸಲಿದೆ. ಫಲಾನುಭವಿ 3,500 ರೂ ವಂತಿಗೆ ಭರಿಸಬೇಕು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ 10 ಸಾವಿರ ರೂ ಸಾಲ ಸೌಲಭ್ಯವೂ ಉಂಟು. ಒಟ್ಟು 63,500 ರೂ ಮೊತ್ತದಲ್ಲಿ ಆರ್ಥಿಕ ವರ್ಷದಡಿಯೇ ಮನೆ ನಿರ್ಮಿಸಿಕೊಳ್ಳುವುದು ಕಡ್ಡಾಯ.

2010-11ನೇ ಸಾಲಿನಡಿ ಇಂದಿರಾ ಆವಾಸ್ ಯೋಜನೆಯನ್ನು ರಾಜ್ಯ ಸರ್ಕಾರ `ಬಸವ ಇಂದಿರಾ ವಸತಿ ಯೋಜನೆ~ಯೆಂದು ನಾಮಕರಣ ಮಾಡಿತು. ಇದಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತು. ನಂತರ, ಇದೇ ಯೋಜನೆಗೆ `ಬಸವ ವಸತಿ ಯೋಜನೆ~ಯೆಂದು ಮರುನಾಮಕರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಫಲವಾಯಿತು. ಆದರೆ, ಪ್ರಸಕ್ತ ಸಾಲಿನಡಿ ಇಂದಿರಾ ಆವಾಸ್ ಯೋಜನೆ ಹೆಸರಿನಲ್ಲಿಯೇ ಮನೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಾಗಿ, ಈ ವರ್ಷದಿಂದ ಇಂದಿರಾ ಆವಾಸ್  ಹೆಸರಿನಡಿಯೇ ಮನೆ ಹಂಚಿಕೆ ನಡೆಯಲಿದೆ.

ಬಸವ ವಸತಿ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 4 ಸಾವಿರ ಮನೆ ಹಂಚುವುದಾಗಿ ರಾಜ್ಯ ಸರ್ಕಾರ ಘೋಷಿಸಿತು. ಅದರನ್ವಯ ಗುಡಿಸಲುರಹಿತ ರಾಜ್ಯ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಲಾಟರಿ ಮೂಲಕ ಫಲಾನುಭವಿಗಳು ಆಯ್ಕೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಈ ಯೋಜನೆಯಡಿ ಮೊದಲ ಹಂತದಲ್ಲಿ ಒಟ್ಟು 8,975 ಮನೆಗಳಿಗೆ ಅನುಮೋದನೆ ನೀಡಲಾಗಿದೆ. ಚಾಮರಾಜನಗರ- 3,361, ಕೊಳ್ಳೇಗಾಲ- 1,897, ಗುಂಡ್ಲುಪೇಟೆ- 1,724 ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿ 1,993 ಮನೆಗಳಿಗೆ ಅನುಮೋದನೆ ಸಿಕ್ಕಿದೆ.

ಫಲಾನುಭವಿಗಳ ಪಟ್ಟಿಯನ್ನು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ- 50 ಸಾವಿರ ರೂ, ಬ್ಯಾಂಕ್ ಸಾಲ- 10 ಸಾವಿರ ರೂಪಾಯಿಯೊಂದಿಗೆ ಫಲಾನುಭವಿಯೂ 3,500 ರೂ ವಂತಿಗೆ ಭರಿಸಬೇಕಿದೆ. ಈಗಾಗಲೇ, ಶಾಸಕರ ಸಮ್ಮುಖದಲ್ಲಿ ಮನೆ ಮಂಜೂರಾತಿ ಆದೇಶ ಪತ್ರ ವಿತರಣೆಯೂ ನಡೆದಿದ್ದು, ಕೆಲವು ಫಲಾನುಭವಿಗಳು ಮನೆ ನಿರ್ಮಾಣಕ್ಕೂ ಚಾಲನೆ ನೀಡಿದ್ದಾರೆ.

ಫಲಾನುಭವಿಗಳಿಗೆ ಗಡುವು: ಜಿಲ್ಲೆಗೆ 2009-10ನೇ ಸಾಲಿನಡಿ ಇಂದಿರಾ ಆವಾಸ್ ಯೋಜನೆಯಡಿ ಒಟ್ಟು 3,766 ಮನೆ ಮಂಜೂರಾಗಿದ್ದವು. ಈ ವರ್ಷದ ಜೂನ್ ಅಂತ್ಯದವರೆಗೆ ಒಟ್ಟು 2,076 ಮನೆ ಮಾತ್ರ ಪೂರ್ಣಗೊಂಡಿವೆ. 1,516 ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, 174 ಮನೆಗಳು ಇಂದಿಗೂ ಪ್ರಾರಂಭಗೊಂಡಿಲ್ಲ.

ನಿವೇಶನದ ಸಮಸ್ಯೆ ಸೇರಿದಂತೆ ಹಣಕಾಸಿನ ತೊಂದರೆಯಿಂದ ಇಲ್ಲಿಯವರೆಗೂ ಮನೆ ನಿರ್ಮಾಣಕ್ಕೆ ಚಾಲನೆ ನೀಡದಿರುವ ಫಲಾನುಭವಿಗಳಿಗೆ ಗಡುವು ನೀಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಡಿ ಮನೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ.

`ಪ್ರಸ್ತುತ ಇಂದಿರಾ ಆವಾಸ್ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಮ ಸಭೆ ಮೂಲಕವೇ ಫಲಾನುಭವಿಗಳ ಆಯ್ಕೆಯನ್ನು ಕಡ್ಡಾಯಗೊಳಿಸಲಾಗಿದೆ. ನಿಯಮಾವಳಿ ಉಲ್ಲಂಘನೆ ಮಾಡದಂತೆ ಗ್ರಾ.ಪಂ. ಕಾರ್ಯದರ್ಶಿಗಳು ಹಾಗೂ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರವೇ, ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಅರ್ಹರು ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು~ ಎಂದು ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿ ಪಿ.ಜಿ. ವೇಣುಗೋಪಾಲ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.