ADVERTISEMENT

ಓಟಿಗಾಗಿ ಮತದಾರರಿಗೆ ಜಾತಿ ಲೇಪನ

ಚುನಾವಣಾ ಪ್ರಚಾರದ ಸೆಳೆತ: ಕೂಲಿಯಾಳುಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 6:34 IST
Last Updated 21 ಏಪ್ರಿಲ್ 2013, 6:34 IST

ಚಾಮರಾಜನಗರ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ರಂಗೇರಿದ್ದು, ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ಜಾತಿಯ ಅಸ್ತ್ರ ಬಳಸುತ್ತಿದ್ದಾರೆ.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರು `ಜಾತಿ' ಬಳಸಿಕೊಂಡು ಮತ ಪಡೆಯಲು ಮುಂದಾಗಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಕ್ಷೇತ್ರದಲ್ಲಿರುವ ಬಲಾಢ್ಯ ಜಾತಿ ಆಧಾರಿತವಾಗಿಯೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವುದು ಗುಟ್ಟೇನಲ್ಲ. ಹೀಗಾಗಿ, ಇತರೇ ಜಾತಿಯ ಮತ ಪಡೆಯಲು ಅಭ್ಯರ್ಥಿಗಳು ಸರ್ಕಸ್ ಮಾಡುತ್ತಿದ್ದಾರೆ.

ಬೆಳಿಗ್ಗೆಯೇ ಗ್ರಾಮಗಳಿಗೆ ಅಭ್ಯರ್ಥಿಗಳು ಪ್ರಚಾರಕ್ಕೆ ತೆರಳುವುದು ಸಾಮಾನ್ಯ ನೋಟ.   ಊರಿನ ಗ್ರಾಮದೇವತೆಗೆ ಪೂಜೆ ಸಲ್ಲಿಸುತ್ತಾರೆ. ನಂತರ ಬಸ್‌ನಿಲ್ದಾಣ, ಜಗಲಿಕಟ್ಟೆ, ಚಾವಡಿ, ಪ್ರಮುಖ ನಾಯಕರ ಮನೆ ಮುಂಭಾಗ ತಮ್ಮ ಸಾಧನೆ ಹಾಗೂ ವಿರೋಧಿಗಳ ವಿರುದ್ಧ ವಾಗ್ಬಾಣ ಬಿಡುತ್ತಾರೆ. ನಂತರ, ಮನೆಗಳಿಗೆ ತೆರಳಿ ಮತಯಾಚಿಸಲು ಮುಂದಾಗುತ್ತಾರೆ.

ಆ ವೇಳೆ ಬೀದಿಗಳಲ್ಲಿರುವ ಜಾತಿಯ ಜನರ ಬಗ್ಗೆ ಅಲ್ಲಿನ ಸ್ಥಳೀಯ ಮುಖಂಡರು ಅಭ್ಯರ್ಥಿಗಳ ಕಿವಿಯಲ್ಲಿ ಉಸುರುತ್ತಾರೆ. ಆಗ ತಮ್ಮಂದಿಗೆ ಕರೆತಂದಿರುವ ಬೀದಿಯಲ್ಲಿರುವ ಜಾತಿ ಪ್ರತಿನಿಧಿಸುವ ಮುಖಂಡ ಅಭ್ಯರ್ಥಿಯೊಂದಿಗೆ ಕೈಮುಗಿದುಕೊಂಡು ಮತಭಿಕ್ಷೆ ಬೇಡುತ್ತಾನೆ. ಆ ಬೀದಿ ಕೊನೆಗೊಂಡ ನಂತರ ಇನ್ನೊಂದು ಬೀದಿಯತ್ತ ಮತಯಾಚನೆಗೆ ಹೋಗುತ್ತಾರೆ. ಆ ಬೀದಿಯಲ್ಲಿರುವ ಜಾತಿ ಪ್ರತಿನಿಧಿಸುವ ಮುಖಂಡ ಮುಂಚೂಣಿಗೆ ಬಂದು ಅಭ್ಯರ್ಥಿಯೊಂದಿಗೆ ಮತ ಬೇಡುತ್ತಾನೆ. ಹೀಗೆ ಬೀದಿಗೊಂದರಂತೆ ಜಾತಿಯ ಪ್ರತಿನಿಧಿಸುವ ಮುಖಂಡರು ಕೂಡ ಬದಲಾಗುತ್ತಾರೆ.

ಬೆಳಿಗ್ಗೆ ಯಾವ ಊರಿಗೆ ಪ್ರಚಾರಕ್ಕೆ ತೆರಳಬೇಕು ಎಂಬುದನ್ನು ಅಭ್ಯರ್ಥಿಗಳು ರಾತ್ರಿ ನಿರ್ಧರಿಸುತ್ತಾರೆ. ಅಲ್ಲಿರುವ ಜಾತಿಗಳ ಬಗ್ಗೆಯೂ ಲೆಕ್ಕಾಚಾರ ಹಾಕುತ್ತಾರೆ. ಅದಕ್ಕೆ ತಕ್ಕಂತೆ ತಂತ್ರಗಾರಿಕೆ ಹೆಣೆಯುವ ಅಭ್ಯರ್ಥಿಗಳು ತಮ್ಮ ಪಕ್ಷದಲ್ಲಿ ಆ ಜಾತಿ ಪ್ರತಿನಿಧಿಸುವ ಹಿರಿಯ ಮುಖಂಡನನ್ನು ಜತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಕೆಲವು ವೇಳೆ ಆ ಸಮುದಾಯ ಪ್ರತಿನಿಧಿಸುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಪ್ರಚಾರದ ಮುಂಚೂಣಿವಹಿಸುತ್ತಾರೆ. ತಮ್ಮ ಅಭ್ಯರ್ಥಿಗೆ ಮತ ನೀಡಬೇಕು ಎಂದು ಪುಸಲಾಯಿಸುತ್ತಾರೆ.

ಕಾರ್ಮಿಕರಿಗೆ ಬರ
ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಚುನಾವಣೆ ಪರಿಣಾಮ ಕೂಲಿಕಾರ್ಮಿಕರಿಗೆ ಬರ ಎದುರಿಸುವಂತಾಗಿದೆ.
ಬಹುತೇಕ ಕೂಲಿಕಾರ್ಮಿಕರು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪರಿಣಾಮ ನೀರಾವರಿ ಪ್ರದೇಶದಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಇನ್ನೊಂದೆಡೆ ನಗರ, ಪಟ್ಟಣ ಪ್ರದೇಶದಲ್ಲಿ ಕಟ್ಟಡ, ಮನೆ ನಿರ್ಮಾಣ ಕಾಮಗಾರಿಗೂ ತೊಂದರೆಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ದಿನವೊಂದಕ್ಕೆ ಹೆಣ್ಣಾಳಿಗೆ 100ರಿಂದ 150 ರೂ ಕೂಲಿ ದರ ನಿಗದಿಪಡಿಸಲಾಗಿದೆ. ಗಂಡಸರಿಗೆ 200 ರೂನಿಂದ 250 ರೂ ಕೂಲಿ ದರವಿದೆ. ಆದರೆ, ಈಗ ಬಹಳಷ್ಟು ಕಾರ್ಮಿಕರು ರಾಜಕೀಯ ಪಕ್ಷದ ಅಭ್ಯರ್ಥಿಗಳ ಹಿಂದೆ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಪ್ರಚಾರಕ್ಕೆ ಹೋದವರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಕೂಡ ಸಿಗುತ್ತದೆ. ಜತೆಗೆ, ಕೈಗೆ 400 ರೂನಿಂದ 500 ರೂ ಸಿಗುತ್ತದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದರೂ ಕೂಲಿ ಹಣ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಿದೆ. ಅಭ್ಯರ್ಥಿಗಳ ಹಿಂದೆ ಜೈಕಾರ ಮೊಳಗಿಸುವುದರಿಂದ ಜಮೀನಿನಲ್ಲಿ ದುಡಿದಾಗ ಕಾಡುವಷ್ಟು ಮೈಕೈ ನೋವು ಇರುವುದಿಲ್ಲ. ಜತೆಗೆ, ರಾತ್ರಿ ವೇಳೆಗೆ ಅಭ್ಯರ್ಥಿಗಳಿಂದ ಗುಂಡು-ತುಂಡಿನ ಸಮಾರಾಧನೆಯೂ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯು ವವರೆಗೂ ಕೃಷಿ ಜಮೀನುಗಳತ್ತ ಕೂಲಿಕಾರ್ಮಿಕರು ತೆರಳುವುದು ಕಡಿಮೆ.

ನಗರ, ಪಟ್ಟಣ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡುವ ಗಾರೆ ಕೆಲಸಗಾರರಿಗೆ ದಿನವೊಂದಕ್ಕೆ 400 ರೂ ನೀಡಲಾಗುತ್ತದೆ. ಸಿಮೆಂಟ್ ಕಲಸಿಕೊಡುವ ಕಾರ್ಮಿಕರಿಗೆ 250 ರೂ ಕೂಲಿ ಸಿಗುತ್ತದೆ. ಆದರೆ, ಚುನಾವಣಾ ಪ್ರಚಾರಕ್ಕೆ ತೆರಳಿದರೆ 500 ರೂ ಸಿಗುವ ಹಿನ್ನೆಲೆಯಲ್ಲಿ ಕಾರ್ಮಿಕರು ಅಭ್ಯರ್ಥಿಗಳ ಹಿಂದೆ ಜೈಕಾರ ಮೊಳಗಿಸುತ್ತಿದ್ದಾರೆ. ಹೀಗಾಗಿ, ಕಟ್ಟಡ, ಮನೆ ನಿರ್ಮಾಣದ ಉಸ್ತುವಾರಿವಹಿಸಿಕೊಂಡಿರುವ ಗುತ್ತಿಗೆದಾರರು ಸಂಕಷ್ಟ ಅನುಭವಿಸುವಂತಾಗಿದೆ.

`ಬಾಳೆ, ಮೆಣಸಿನಕಾಯಿ ಸೇರಿದಂತೆ ತರಕಾರಿ ಬೆಳೆದಿದ್ದೇನೆ. ಕಳೆ ಸಸ್ಯಗಳು ಬೆಳೆದು ನಿಂತಿವೆ. ಅವುಗಳನ್ನು ಕಿತ್ತುಹಾಕಿದರೆ ಮಾತ್ರ ಬಿತ್ತಿರುವ ಫಸಲು ಕೈಗೆ ಸಿಗುತ್ತದೆ. ಆದರೆ, ಕೂಲಿಯಾಳುಗಳು ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದಾರೆ. ಯಾರೊಬ್ಬರು ಕೂಲಿ ಕೆಲಸಕ್ಕೆ ಬರುವುದಿಲ್ಲ. ಹೀಗಾಗಿ, ಮನೆಯವರೇ ಕಳೆ ಕೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ' ಎನ್ನುತ್ತಾರೆ ಸಂತೇಮರಹಳ್ಳಿಯ ರೈತ ಬಸಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.