ADVERTISEMENT

ಕನಕಗಿರಿ ಅಭಿವೃದ್ಧಿಗೆ ರೂ.8 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 6:40 IST
Last Updated 19 ಸೆಪ್ಟೆಂಬರ್ 2011, 6:40 IST

ಚಾಮರಾಜನಗರ: ತಾಲ್ಲೂಕಿನ ಕನಕಗಿರಿ ಕ್ಷೇತ್ರವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ 8 ಕೋಟಿ ರೂ ಮಂಜೂರಾಗಿದೆ.

`2013ರಲ್ಲಿ ಜೈನರ ಪವಿತ್ರ ಕ್ಷೇತ್ರವಾದ ಕನಕಗಿರಿಯಲ್ಲಿ ಅಖಿಲ ಭಾರತ ಜೈನ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಮಂಜೂರಾಗಿದೆ. ಜತೆಗೆ, ಮಂಜೂರಾತಿ ನೀಡಿರುವಷ್ಟೇ ಪ್ರಮಾಣದ ಹಣವನ್ನು ಕಾಯ್ದಿರಿಸ ಲಾಗಿದೆ~ ಎಂದು ಸಂಸದ ಆರ್. ಧ್ರುವನಾರಾಯಣ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ರಾಜ್ಯ ಸರ್ಕಾರದಿಂದ ಕಳುಹಿಸಿದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಯೋಜನೆ ಜಾರಿಗೊ ಳಿಸಲು ಅಗತ್ಯವಿರುವ 10 ಎಕರೆ ಜಮೀನನ್ನು ಪ್ರವಾ ಸೋದ್ಯಮ ಇಲಾಖೆಗೆ ವರ್ಗಾಯಿಸಿಕೊಂಡು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರು ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಆಯುಕ್ತ ರೊಂದಿಗೆ ಚರ್ಚಿಸಿದ್ದೇನೆ~ ಎಂದರು.

ರಸ್ತೆ, ಸ್ಮಾರಕಗಳ ರಕ್ಷಣೆ, ಮ್ಯೂಸಿಯಂ, ಉದ್ಯಾನ ಹಾಗೂ ಡಾರ್ಮೇಂಟ್ರಿ ನಿರ್ಮಿಸಲಾಗುವುದು.  ಶೌಚಾಲಯ ನಿರ್ಮಾಣಕ್ಕೂ ಒತ್ತು ನೀಡಲಾಗುವುದು. ಜತೆಗೆ, ಪ್ರವಾಸೋದ್ಯಮ ಇಲಾಖೆಯಿಂದಲೂ ಕ್ಷೇತ್ರದ ಅಭಿವೃದ್ಧಿಗೆ 1.50 ಕೋಟಿ ರೂ ಮಂಜೂರಾಗಿದೆ. ಇದರಲ್ಲಿ 25 ಲಕ್ಷ ರೂ ಬಿಡುಗಡೆಯಾಗಿದೆ. ಉಳಿದ ಅನುದಾನ ಬಳಸಿಕೊಂಡು ಯಾತ್ರಿ ನಿವಾಸ ನಿರ್ಮಿಸಲು ಮಂಜೂರಾತಿ ದೊರೆತಿದೆ.

ಅಂದಾಜುಪಟ್ಟಿ ತಯಾರಿಸಲು ಮೈಸೂರಿನ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ ಎಂದು ವಿವರಿಸಿದರು.
ಸಮ್ಮೇಳನ ನಡೆಯುವ ವೇಳೆಗೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತು ಕನಕಗಿರಿ ಶ್ರೀಗಳೊಂದಿಗೆ ಚರ್ಚಿಸಲಾಗಿದೆ. ಪ್ರವಾ ಸೋದ್ಯಮ ಇಲಾಖೆಯಿಂದ ಕ್ರಿಯಾಯೋಜನೆ ತಯಾ ರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ ಹಣ ಬಿಡು ಗಡೆಯಾಗಲಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಏಜೆನ್ಸಿ ನಿಗದಿ ಪಡಿಸಿ ನೀಲನಕ್ಷೆ ಹಾಗೂ ಅಂದಾಜುಪಟ್ಟಿ ಸಿದ್ಧ ಪಡಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ ಎಂದರು.

ರೂ.100 ಕೋಟಿ ಯೋಜನೆ
ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ 100 ಕೋಟಿ ರೂ ವೆಚ್ಚದಲ್ಲಿ ಬೃಹತ್ ಯೋಜನೆ ಅನುಷ್ಠಾನಕ್ಕೂ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ, ಬೆಂಗಳೂರಿನ ಕೀರ್ತಿ ಕನ್ಸ್‌ಲ್ಟೆಂಟ್‌ನಿಂದ ವರದಿ ಸಿದ್ಧಪಡಿಸಲಾಗಿದೆ ಎಂದರು.

ಹೊಗೇನಕಲ್ ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು 10 ಎಕರೆ ಜಾಗದ ಆವಶ್ಯಕತೆಯಿದೆ. ಜಲಪಾತ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬಳಪಟ್ಟಿದೆ. ಹೀಗಾಗಿ, ಪ್ರವಾಸೋದ್ಯಮ ಇಲಾಖೆಯ ವಶಕ್ಕೆ ಜಮೀನು ಪಡೆದ ನಂತರ ಪ್ರಸ್ತಾವ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ತಯಾರಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆಗೂ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ತುರ್ತುಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಭರಚುಕ್ಕಿ ಅಭಿವೃದ್ಧಿ
ಭರಚುಕ್ಕಿ ಜಲಪಾತದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 4.50 ಕೋಟಿ ರೂ ಮಂಜೂರಾಗಿತ್ತು. ಇದರಲ್ಲಿ 90 ಲಕ್ಷ ರೂ ಬಿಡುಗಡೆಯಾಗಿದೆ. ಈ ಅನುದಾನ ಬಳಸಿಕೊಂಡು 1.05 ಕಿ.ಮೀ. ಉದ್ದದ ಚೈನ್‌ಲಿಂಕ್ ಮೆಷ್, 2 ವೀಕ್ಷಣಾ ಗೋಪುರ, ಮೆಟ್ಟಿಲು, ಪ್ಯಾರಾಗೋಲ ನಿರ್ಮಿಸಲಾಗಿದೆ. ಸದ್ಯದಲ್ಲೇ 75 ಲಕ್ಷ ರೂ ಬಿಡುಗಡೆಯಾಗಲಿದ್ದು, ಶೌಚಾಲಯ, ಉದ್ಯಾನ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಫಣೀಶ್, ಮುಖಂಡರಾದ ಬಿ.ಕೆ. ರವಿಕುಮಾರ್, ಸೈಯದ್ ರಫೀ, ಕೆಂಗಣ್ಣಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.