ADVERTISEMENT

ಕನಕಗಿರಿ: ಗಣಿಗಾರಿಕೆ ನಿಷೇಧಕ್ಕೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 11:25 IST
Last Updated 7 ಮಾರ್ಚ್ 2012, 11:25 IST

ಚಾಮರಾಜನಗರ: ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿರುವ ಕನಕಗಿರಿ ಪಂಚಮುಖಿ ಬೆಟ್ಟದ ಪ್ರದೇಶದ ವ್ಯಾಪ್ತಿ ಅಕ್ರಮ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಕೂಡಲೇ ನಿಷೇಧಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಮಲೆಯೂರು ಸೇರಿದಂತೆ ಅರಳೀಕಟ್ಟೆ, ಕೀಳಲಿಪುರ, ಶ್ರೀರಾಮಪುರ, ಹಿರೇಬೇಗೂರು, ಚಿಕ್ಕಬೇಗೂರು ಹಾಗೂ ಕೆಬ್ಬೇಪುರದ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮಲೆಯೂರಿನಿಂದ ಮೆರವಣಿಗೆ ಆರಂಭಿಸಿದ ಗ್ರಾಮಸ್ಥರು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ತೆರಳಿ ಘೋಷಣೆ ಕೂಗಿದರು. ಮಲೆಯೂರು ಮತ್ತು ಕಿಳಲೀಪುರದ ಗೋಮಾಳ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.
 
ಇದರಿಂದ ಸುತ್ತಮುತ್ತಲಿನ ಪರಿಸರಕ್ಕೆ ಕಂಟಕ ಎದುರಾಗಿದೆ. ಗಣಿಗಾರಿಕೆ ನಿಷೇಧಿಸಲು ಜಿಲ್ಲಾಧಿಕಾರಿ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ. ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದರು.

ಗಣಿಗಾರಿಕೆಗೆ ಸ್ಫೋಟಕ ಬಳಸುವುದರಿಂದ ಕನಕಗಿರಿಯ ಪಾರ್ಶ್ವನಾಥ ಬಸದಿ, ಗ್ರಾಮದ ಬನ್ನಿಕಾಳಿಯಮ್ಮ ಬ್ರಹ್ಮಲಿಂಗೇಶ್ವರ ದೇವಸ್ಥಾನಗಳಿಗೆ ಹಾನಿಯಾಗುತ್ತಿದೆ. ಗ್ರಾಮದ ಮನೆಗಳಿಗೂ ಹಾನಿಯಾಗುತ್ತಿದ್ದು, ಕೂಡಲೇ ಗಣಿ ಗುತ್ತಿಗೆ ರದ್ದುಪಡಿಸಬೇಕು.
 
ಇಲ್ಲವಾದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಬಿ.ಡಿ. ನರಸಿಂಹಮೂರ್ತಿ ಮಾತನಾಡಿ, `ಸಂಬಂಧಪಟ್ಟ ಗಣಿ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು. 

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಮುಖಂಡರಾದ ವಿಜಯಕುಮಾರ್, ಎಲ್. ಚಿಕ್ಕನಾಗಣ್ಣ, ಎಂ.ಬಿ. ಮಹದೇವಪ್ಪ, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಮಾದಪ್ಪ, ಲಿಂಗಣ್ಣ, ಚಿನ್ನಸ್ವಾಮಿ, ರಾಜು, ಎಂ.ಎಸ್. ನಾಗಪ್ಪ, ಉಮೇಶ್ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.