ADVERTISEMENT

ಕನ್ನಡ-ತಮಿಳು ಭಾಷಾ ಸಾಮರಸ್ಯದ ಪಠಣ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 7:30 IST
Last Updated 6 ಏಪ್ರಿಲ್ 2012, 7:30 IST

ಚಾಮರಾಜನಗರ: `ಕನ್ನಡಿಗರು ಮತ್ತು ತಮಿಳು ಭಾಷಿಕರ ನಡುವೆ ಕಂದರಗಳು ಬೇಡ. ಮನಸ್ಸನ್ನು ಬೆಸೆಯುವ ಸೇತುವೆಗಳು ನಿರ್ಮಾಣವಾಗಬೇಕು~ ಎಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಆಶಿಸಿದರು.

ಜಿಲ್ಲೆಗೆ ಹೊಂದಿಕೊಂಡಿರುವ ತಾಳವಾಡಿ ಗ್ರಾಮದಲ್ಲಿ ಗುರುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ತಾಳವಾಡಿ- ಫಿರ್ಕಾ ತಾಲ್ಲೂಕು ಯೂನಿಯನ್ ಹಾಗೂ ಕನ್ನಡಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಭಾಷಾ ಭಾವೈಕ್ಯ ಸಮಾವೇಶ ಹಾಗೂ ಹೊರನಾಡು ಕನ್ನಡಿಗರ ಸಂಸ್ಕೃತಿ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಿಗರ ಹೃದಯ ವೈಶಾಲ್ಯತೆ ಹಾಗೂ ತಮಿಳರ ಸೌಹಾರ್ದ ಮನೋಭಾವ ಒಗ್ಗೂಡಬೇಕಿದೆ. ಆಗ ಭಾಷಾ ಸಾಮರಸ್ಯವೂ ಮೂಡುತ್ತದೆ. ಭಾಷಾ ಭಾವೈಕ್ಯಕ್ಕೆ ನೈಜ ಅರ್ಥ ಸಿಗುತ್ತದೆ. ಯಾವುದೇ, ಭಾಷಿಕರ ನಡುವೆ ವಿರಸ ಸಲ್ಲದು. ಭ್ರಾತೃತ್ವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

`80ರ ದಶಕದಲ್ಲಿ ತಾಳವಾಡಿಯಲ್ಲಿ ಕಸಾಪದಿಂದ ಕನ್ನಡಿಗರ ಸಮಾವೇಶ ಹಮ್ಮಿಕೊಂಡಿದ್ದೆ. ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗರ್ ಕಾರ್ಯಕ್ರಮಕ್ಕೆ ಬಂದಿದ್ದರು.  ಆ ವೇಳೆ ಇಷ್ಟು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ತಾಳವಾಡಿ ಫಿರ್ಕಾದ ಸಾಕಷ್ಟು ಕನ್ನಡಿಗರು, ತಮಿಳು ಭಾಷಿಕರು ಸಮಾವೇಶದಲ್ಲಿ ಭಾಗವಹಿಸುವುದು ಹೆಮ್ಮೆ ತಂದಿದೆ~ ಎಂದು ನುಡಿದರು.

`ತಮಿಳಿನಲ್ಲಿ ಸಂಗಂ ಸಾಹಿತ್ಯ ಯುಗಕ್ಕೆ ವಿಶೇಷ ಮನ್ನಣೆ ಯಿದೆ. ಆ ವೇಳೆ ಹಲವು ತಮಿಳು ಸಾಹಿತಿಗಳು ತಮಿಳು ಭಾಷೆಗೆ ಅಪೂರ್ವ ಕೊಡುಗೆ ನೀಡಿದ್ದಾರೆ. ತಮಿಳುನಾಡಿನಲ್ಲಿ 2ರಿಂದ 3ನೇ ಶತಮಾನದ ಅವಧಿಯಲ್ಲಿ ನಿರ್ಮಾಣ ವಾಗಿರುವ 97 ಶಾಸನ ಪತ್ತೆಯಾಗಿವೆ. ಅರ್ಧದಷ್ಟು ಶಾಸನಗಳಲ್ಲಿ ಕನ್ನಡದ ಬಗ್ಗೆ ವಿವರಣೆ ಇದೆ~ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, `ದ್ರಾವಿಡ ಭಾಷೆಗಳಲ್ಲಿ ಕನ್ನಡ ಮತ್ತು ತಮಿಳು ಭಾಷೆ ವಿಶಿಷ್ಟ ಸ್ಥಾನ ಪಡೆದಿವೆ. ಕನ್ನಡಕ್ಕೆ 2 ಸಾವಿರ ವರ್ಷದ ಇತಿಹಾಸವಿದೆ. ಶಾಸ್ತ್ರೀಯ ಸ್ಥಾನಮಾನ ಕೂಡ ಲಭಿಸಿದೆ. ಕನ್ನಡಕ್ಕೆ ಲಭಿಸಿರುವ  ಜ್ಞಾನಪೀಠ ಪ್ರಶಸ್ತಿಗಳು ಭಾಷೆಯ ಸತ್ವವನ್ನು ಸಾರುತ್ತದೆ~ ಎಂದು ಹೇಳಿದರು.

ಗಡಿನಾಡು ಮತ್ತು ಹೊರನಾಡು ಕನ್ನಡಿಗರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಬಿ.ಎಸ್. ಯಡಿ ಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿದರು. ತಮಿಳುನಾಡಿನಲ್ಲೂ ಸರ್ವಜ್ಞನ ಪ್ರತಿಮೆ ಸ್ಥಾಪಿಸಿ ಇತಿಹಾಸ ಬರೆದರು ಎಂದ ಅವರು, ತಾಳವಾಡಿಯಲ್ಲಿರುವ ಕನ್ನಡಿಗರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಶಾಸಕ ಎಚ್.ಎಸ್. ಮಹದೇವಪ್ರಸಾದ್ ಮಾತನಾಡಿ, `ತಾಳವಾಡಿ ಫಿರ್ಕಾದಲ್ಲಿರುವ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕನ್ನಡಿಗರಿದ್ದಾರೆ. ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡುವ ಹೊರನಾಡು ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಮುಂದಾಗಬೇಕು~ ಎಂದು ಒತ್ತಾಯಿಸಿದರು.

ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವವಹಿಸಿದ್ದರು. ತಾಳವಾಡಿ ಕನ್ನಡ ಸಂಘದ ಅಧ್ಯಕ್ಷ ಎಸ್. ಚೆನ್ನಂಜಪ್ಪ, ಈರೋಡ್‌ನ ಜಿಲ್ಲಾ ಕೌನ್ಸಿಲರ್ ನಿರ್ಮಲಾ ಭಟ್ಟಿಮಲ್ಲಪ್ಪ, ತಾಳವಾಡಿ ಯೂನಿಯನ್ ಛೇರ್ಮನ್ ಕೆಂಪಮ್ಮಣ್ಣಿ ಚೆನ್ನಂಜಪ್ಪ, ವೈಸ್ ಛೇರ್ಮನ್ ಸುಂದರಿಪ್ರಕಾಶ್, ಕನ್ನಡಪರ ಚಿಂತಕ ಸಿದ್ದನಗೌಡ ಪಾಟೀಲ್, ನಾಗರಾಜಮೂರ್ತಿ, ಕೆ.ಪಿ. ಮಹಾದೇವಸ್ವಾಮಿ, ಪದ್ಮಾ ಚಂದ್ರು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.