ADVERTISEMENT

ಕಲುಷಿತ ನೀರು ಪೂರೈಕೆ: ಕಾಯಿಲೆ ಭೀತಿ

ಚೆನ್ನಾಲಿಂಗನಹಳ್ಳಿ ಗ್ರಾಮದ ಆದಿಜಾಂಬವರ ಬಡಾವಣೆಯಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 8:48 IST
Last Updated 7 ಮಾರ್ಚ್ 2018, 8:48 IST
ಹನೂರು ತಾಲ್ಲೂಕಿನ ಚೆನ್ನಾಲಿಂಗನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನೊಂದಿಗೆ ಮಿಶ್ರಣಗೊಳ್ಳುತ್ತಿರುವ ಚರಂಡಿ ನೀರು.
ಹನೂರು ತಾಲ್ಲೂಕಿನ ಚೆನ್ನಾಲಿಂಗನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನೊಂದಿಗೆ ಮಿಶ್ರಣಗೊಳ್ಳುತ್ತಿರುವ ಚರಂಡಿ ನೀರು.   

ಹನೂರು: ತಾಲ್ಲೂಕಿನ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಾಲಿಂಗನಹಳ್ಳಿ ಗ್ರಾಮದ ಆದಿಜಾಂಬವರ ಬಡಾವಣೆಯಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ಕೆಲ ನಿವಾಸಿಗಳು ವಿವಿಧ ರೋಗಗಳಿಗೆ ತುತ್ತಾಗಿ ನರಳುವಂತಾಗಿದೆ.

ಐದು ತಿಂಗಳ ಹಿಂದೆ ಗ್ರಾಮದಲ್ಲಿ ಚರಂಡಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿತ್ತು. ಆದರೆ, ಅದನ್ನು ಸರಿಯಾಗಿ ಮುಚ್ಚದ ಕಾರಣ ಚರಂಡಿ ನೀರು ಕುಡಿಯುವ ನೀರಿನ ಜತೆ ಮಿಶ್ರಣಗೊಂಡು ಕಲುಷಿತಗೊಳ್ಳುತ್ತಿದೆ ಎಂಬುದು ಬಡಾವಣೆ ನಿವಾಸಿಗಳ ಆರೋಪಿಸಿದ್ದಾರೆ.

'ಕುಡಿಯುವ ನೀರಿಗೆ ಕಲುಷಿತ ನೀರು ಸೇರುತ್ತಿರುವುದರಿಂದ ಪ್ರತಿನಿತ್ಯ ಕೊಳಚೆ ನೀರನ್ನೇ ಕುಡಿಯುವಂತಾಗಿದೆ. ಪರಿಣಾಮ ಕೆಲವರಿಗೆ ಚರ್ಮ ಸೋಂಕು ಕಾಣಿಸಿಕೊಂಡಿದೆ. ಇನ್ನು ಕೆಲವರಿಗೆ ಕೆಮ್ಮು, ಜ್ವರ ಕಾಣಿಸಿಕೊಂಡಿದೆ. ಈ ಬಗ್ಗೆ ನಾಲ್ಕು ತಿಂಗಳಿನಿಂದಲೂ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡುತ್ತಿದ್ದರೂ ಯಾವುದೇ ಪ್ರಯೊಜನವಾಗಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಹ ಇದರ ಬಗ್ಗೆ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಬಡಾವಣೆಯ ನಿವಾಸಿ ರಾಚಪ್ಪ ಆರೋಪಿಸಿದರು.

ADVERTISEMENT

'ಕೊಳಚೆ ನೀರು ಕುಡಿಯುತ್ತಿ ರುವುದರಿಂದ ಮಕ್ಕಳು ಹಾಗೂ ವೃದ್ಧರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ರೋಗ ಹರಡುವ ಭೀತಿಯಿಂದ ಬೇರೊಂದು ಬಡಾವಣೆಯಿಂದ ಕುಡಿಯುವ ನೀರು ತರಬೇಕಿದೆ. ಕಲುಷಿತ ನೀರು ಕುಡಿದ ನಂತರ ನನ್ನ ಮೊಮ್ಮಕ್ಕಳಿಗೆ ಕೆಮ್ಮು ಕಾಣಿಸಿಕೊಂಡಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಕಣ್ಣು ತೆರೆಯಲು ಬಡಾವಣೆಯ ಇನ್ನೆಷ್ಟು ಜನ ರೋಗಕ್ಕೆ ತುತ್ತಾಗಬೇಕು’ ಎಂದು ಬಡಾವಣೆಯ ನಿವಾಸಿ ಮಹದೇವಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರಕಾಶ್, ಕೂಡಲೇ ಸ್ಥಳಕ್ಕೆ ಭೇಟಿ ನೀಡುವಂತೆ ಪಿಡಿಒಗೆ ತಿಳಿಸಲಾಗುವುದು. ಜತೆಗೆ, ಗುರುವಾರ ಸ್ಥಳಕ್ಕೆ ತೆರಳಿ ವಾಸ್ತವವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.