ADVERTISEMENT

ಕಾಂಗ್ರೆಸ್, ಜೆಡಿಎಸ್ ವಿರುದ್ಧ ಟೀಕೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 7:00 IST
Last Updated 23 ಏಪ್ರಿಲ್ 2013, 7:00 IST

ಚಾಮರಾಜನಗರ: ಕಳೆದ 6 ದಶಕದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ ಎಂದು ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ದೂರಿದರು.

ತಾಲ್ಲೂಕಿನ ಮುತ್ತಿಗೆ, ಮರಿಯಾಲದ ಹುಂಡಿ, ಜಾಲಹಳ್ಳಿ ಹುಂಡಿ ಗ್ರಾಮಗಳಲ್ಲಿ ಭಾನುವಾರ ಪಾದಯಾತ್ರೆ ನಡೆಸಿ ಪಕ್ಷದ ಅಭ್ಯರ್ಥಿ ಎಸ್. ಸೋಮನಾಯಕ ಪರ ಮತಯಾಚಿಸಿದ ನಂತರ ಅವರು ಮಾತನಾಡಿದರು.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಕೇವಲ 5 ವರ್ಷದ ಆಡಳಿತದಲ್ಲಿ ಬಿಜೆಪಿ ರಾಜ್ಯ ಸರ್ಕಾರ ಹಲವು ಜನಪರ ಯೋಜನೆ ಜಾರಿಗೊಳಿಸಿದೆ ಎಂದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಜಿಲ್ಲೆಯಲ್ಲಿ ಪಕ್ಷದ ಶಾಸಕರು ಇಲ್ಲದಿದ್ದರೂ ಮಹದೇಶ್ವರಸ್ವಾಮಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಹನೂರು ತಾಲ್ಲೂಕು ಘೋಷಿಸಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ರೂ.100 ಕೋಟಿ ನೀಡಲಾಗಿದೆ. ಮೆಡಿಕಲ್ ಕಾಲೇಜು ಸ್ಥಾಪನೆಗೆ ಕ್ರಮವಹಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಅಭ್ಯರ್ಥಿ ಸೋಮನಾಯಕ ಮಾತನಾಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಮತದಾರರು ತಮ್ಮ ಪರ ಒಲವು ತೋರಬೇಕು ಎಂದರು.

ಮುಖಂಡರಾದ ನೂರೊಂದುಶೆಟ್ಟಿ, ಆರ್. ಸುಂದರ್, ಸಿ.ಎಸ್. ಬಂಗಾರಸ್ವಾಮಿ, ಆರ್. ಪುರುಷೋತ್ತಮ್, ಮಂಜುನಾಥ, ಪಿ. ದೇವರಾಜು, ಶಿವಣ್ಣ, ಮಂಜುನಾಥ್ ಹಾಜರಿದ್ದರು.

ಇದೇ ವೇಳೆ ಜಾಲಹಳ್ಳಿಹುಂಡಿ ಹೊಸ ಬಡಾವಣೆಯಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ಮಾಜಿ ಸಚಿವ ವಿಜಯಶಂಕರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.