ADVERTISEMENT

ಕಾರ್ಮಿಕರ ಶೋಷಣೆ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ಚಾಮರಾಜನಗರ: ‘ಕಾರ್ಮಿಕರಿಗೆ ಅನ್ಯಾಯ, ಶೋಷಣೆಯಾದರೆ ಇಲಾಖೆಯಿಂದ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ  ಕಾರ್ಮಿಕ ಅಧಿಕಾರಿ ಎಂ. ನಾಗರಾಜು ಎಚ್ಚರಿಸಿರು.

ನಗರದಲ್ಲಿ ಭಾನುವಾರ ಜಿಲ್ಲಾ ದಿನಸಿ ಮತ್ತು ಜವಳಿ ಅಂಗಡಿಗಳ ಕೂಲಿ ಕಾರ್ಮಿಕರ ಸಂಘದಿಂದ ನಡೆದ ವಿಶ್ವ ಕಾರ್ಮಿಕ ದಿನಾಚರಣೆ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಕಾರ್ಮಿಕ ದಿನಾಚರಣೆ ಪ್ರಯುಕ್ತ ಅಂಗಡಿ ಮುಚ್ಚಿ ಕಾರ್ಮಿಕರಿಗೆ ರಜೆ ನೀಡಲು ಸೂಚಿಸಲಾಗಿತ್ತು. ಆದರೂ, ಕೆಲವು ಅಂಗಡಿ ಮಾಲೀಕರು  ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಇದು ವಿಷಾದನೀಯ. ಈ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಕಡ್ಡಾಯ ರಜೆ ನೀಡಬೇಕು.  ಇಲ್ಲವಾದಲ್ಲಿ ಕಾನೂನು ಉಲ್ಲಂಘಿ ಸಿದಂತಾಗುತ್ತದೆ’ ಎಂದರು.

‘ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸಬೇಕು. ಹೆಚ್ಚು ಕೆಲಸ ಮಾಡುವ ಕಾರ್ಮಿಕರಿಗೆ ಬೋನಸ್ ನೀಡಬೇಕು. ಕಾರ್ಮಿಕರು ತಮಗೆ ಆಗುತ್ತಿರುವ ತೊಂದರೆ ಕುರಿತು ಇಲಾಖೆಯ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಿಮಗೆ ಸಿಕ್ಕಿರುವ ಹಕ್ಕು ಮತ್ತು  ಸ್ವಾತಂತ್ರ್ಯದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಅನ್ಸರ್ ಅಲಿ ಮಾತನಾಡಿದರು. ಜಿಲ್ಲಾ ದಿನಸಿ ಮತ್ತು ಜವಳಿ ಅಂಗಡಿಗಳ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಶಿವಣ್ಣ, ಸುರೇಶ್‌ನಾಯಕ, ಮಹದೇವನಾಯಕ, ಎಚ್.ಎಸ್. ಚಂದ್ರಶೇಖರ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡ ಶಾ. ಮುರಳಿ, ಸಿ.ಎಂ. ಕೃಷ್ಣಮೂರ್ತಿ, ಚಾ.ರಂ. ಶ್ರೀನಿವಾಸಗೌಡ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.