ADVERTISEMENT

ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 4:00 IST
Last Updated 14 ಅಕ್ಟೋಬರ್ 2012, 4:00 IST

ಚಾಮರಾಜನಗರ: ದೇವಸ್ಥಾನದ ಚಾವಡಿ ನಿರ್ಮಾಣಕ್ಕಾಗಿ 5 ಸಾವಿರ ಹಣ ನೀಡದಿರುವ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ತಾಲ್ಲೂಕಿನ ಹರದನಹಳ್ಳಿ ಹೋಬಳಿಯ ತಾವರೆಕಟ್ಟೆ ಮೋಳೆ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಗ್ರಾಮದ ಉಪ್ಪಾರ ಜನಾಂಗದ ಸ್ವಾಮಿ, ಎಸ್. ಮರಿಶೆಟ್ಟಿ ಹಾಗೂ ಗೋವಿಂದಶೆಟ್ಟಿಯವರ ಕುಟುಂಬಕ್ಕೆ ಅದೇ ಜನಾಂಗದ ಯಜಮಾನರು ಬಹಿಷ್ಕಾರ ಹಾಕಿದ್ದಾರೆ. ಈ ಕುರಿತು ಬಹಿಷ್ಕಾರ ತೆರವುಗೊಳಿಸಲು ಜಿಲ್ಲಾ ಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಕುಟುಂಬದ ಸದಸ್ಯರು ಮೊರೆ ಇಟ್ಟಿದ್ದಾರೆ.

ಬಹಿಷ್ಕಾರ ಹಾಕಿರುವ ಸಂಬಂಧ ಸಂತ್ರಸ್ತರು ನೀಡಿರುವ ಪ್ರಕಟಣೆಯಲ್ಲಿ ಹರದನಹಳ್ಳಿ  ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ತಾವರೆಕಟ್ಟೆ ಮೋಳೆಯ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಸಾಕ್ಷಿಗಳಾಗಿ ಸಹಿ ಕೂಡ ಹಾಕಿದ್ದಾರೆ.

`ಈಚೆಗೆ ಯಡಬೆಟ್ಟದ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಚಾವಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈ ಕುರಿತು ಚರ್ಚಿಸಲು ನಮ್ಮ  ಜನಾಂಗದ ಯಜಮಾನರು ಸಭೆ ಸೇರಿದ್ದರು. ಪ್ರತಿ ಕುಟುಂಬವೂ ಚಾವಡಿ ನಿರ್ಮಾಣಕ್ಕೆ 5 ಸಾವಿರ ರೂ ನೀಡುವಂತೆ ಸೂಚಿಸಿದರು. ಆದರೆ, ಬರಗಾಲದಿಂದ ತತ್ತರಿಸಿರುವ ನಮಗೆ ಹಣ ನೀಡಲು ಸಾಧ್ಯವಿಲ್ಲ ವೆಂದು ಮನವರಿಕೆ ಮಾಡಿಕೊಟ್ಟೆವು. ಈ ಮನವಿ ತಿರಸ್ಕರಿಸಿದ ಯಜಮಾನರು ನಾನು ಸೇರಿದಂತೆ ನನ್ನ ಮಾವ ಗೋವಿಂದಶೆಟ್ಟಿ, ಅಣ್ಣ ಮರಿಶೆಟ್ಟಿ ಕುಟುಂಬ ಹಾಗೂ ಹಣದ ನೀಡದ ಗ್ರಾಮದ ಕೆಲವು ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ~ ಎಂದು ಸ್ವಾಮಿ ತಿಳಿಸಿದ್ದಾರೆ.

ಬಹಿಷ್ಕಾರದ ಪರಿಣಾಮ ಗ್ರಾಮದ ಅಂಗಡಿಗಳಲ್ಲಿ ದಿನಸಿ ಸಾಮಗ್ರಿ ನೀಡುತ್ತಿಲ್ಲ. ಹೋಟೆಲ್‌ಗಳಲ್ಲಿ ತಿಂಡಿ, ಕಾಫಿ, ಟೀ ನೀಡುತ್ತಿಲ್ಲ. ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ವಿದೆ. ಈ ಸಂಘಕ್ಕೆ ಯಜಮಾನನ ಮಗನೇ ಕಾರ್ಯದರ್ಶಿಯಾಗಿದ್ದಾನೆ. ಹೀಗಾಗಿ, ಹಾಲು ಕೂಡ ಕೊಡುತ್ತಿಲ್ಲ. ನಮ್ಮ ಮೇಲೆ ದೌರ್ಜನ್ಯ ಮುಂದು ವರಿದಿದೆ.

ಕೂಡಲೇ, ಬಹಿಷ್ಕಾರ ತೆರವುಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತರಾದ ಸ್ವಾಮಿ, ಮರಿಶೆಟ್ಟಿ ಹಾಗೂ ಗೋವಿಂದಶೆಟ್ಟಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.