ADVERTISEMENT

ಕೂಲಿಯಾಳು ಕೊರತೆ: ರೈತರು ಕಂಗಾಲು

ಮಹದೇವ್ ಹೆಗ್ಗವಾಡಿಪುರ
Published 6 ಸೆಪ್ಟೆಂಬರ್ 2011, 9:40 IST
Last Updated 6 ಸೆಪ್ಟೆಂಬರ್ 2011, 9:40 IST

ವಿಶೇಷ ವರದಿ 
ಸಂತೇಮರಹಳ್ಳಿ:
ಬೆಳಿಗ್ಗೆ ತಿಂಡಿ. ಮಧ್ಯಾಹ್ನ ಊಟ. ಎರಡು ಬಾರಿ ಕಾಫಿ ಅಥವಾ ಟೀ ನೀಡುವುದರೊಂದಿಗೆ ದಿನಕ್ಕೆ 200 ರೂನಿಂದ 250 ರೂ ನೀಡಲು ರೈತರು ಸಿದ್ಧ. ಆದರೆ, ಕೂಲಿಯಾಳು ಮಾತ್ರ ಸಿಗುತ್ತಿಲ್ಲ!
-ಇದು ಹೋಬಳಿ ವ್ಯಾಪ್ತಿಯ ಕಬಿನಿ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿದರೆ ಕಂಡುಬರುವ ಚಿತ್ರಣ.

ಹೋಬಳಿಯ ಬಾಗಳಿ, ಬಾಣಹಳ್ಳಿ, ತೆಳ್ಳನೂರು, ಕಮರವಾಡಿ, ನವಿಲೂರು, ಹೊಮ್ಮ ಸೇರಿದಂತೆ ಇತರೇ ಗ್ರಾಮಗಳಲ್ಲಿ ಭತ್ತದ ಪೈರಿನ ನಾಟಿ ನಡೆಯುತ್ತಿದೆ. ಆದರೆ, ನಿಗದಿತ ವೇಳೆಗೆ ಕೂಲಿಯಾಳು ಸಿಗದೆ ರೈತರು ಕಂಗಾಲಾಗಿದ್ದಾರೆ. ಪ್ರಸಕ್ತ ವರ್ಷ ಕೂಲಿಯಾಳು ವೆಚ್ಚ ಹೆಚ್ಚಿರುವುದು ರೈತರನ್ನು ನಿದ್ದೆಗೆಡಿಸಿದೆ.

ಹೋಬಳಿ ವ್ಯಾಪ್ತಿ ಕಬಿನಿ ನಾಲೆಯ ನೀರಾವರಿ ಪ್ರದೇಶದ ಒಟ್ಟು ವಿಸ್ತೀರ್ಣ 3,160 ಎಕರೆ. ಈಗ ಭತ್ತದ ಪೈರು ನಾಟಿ ಮಾಡುವ ಚಟುವಟಿಕೆ ಚುರುಕುಗೊಂಡಿದೆ. ಆದರೆ, ಸಕಾಲದಲ್ಲಿ ಪೈರು ನಾಟಿ ಮಾಡಲು ಕೂಲಿಯಾಳು ಸಿಗದಿರುವ ಪರಿಣಾಮ ನಾಟಿ ಕೆಲಸಕ್ಕೆ ಹಿನ್ನಡೆಯಾಗಿದೆ.

ಬಿತ್ತನೆ ಭತ್ತ ಬಿತ್ತಿದ ನಂತರ 20ರಿಂದ 25 ದಿನದೊಳಗೆ ನಾಟಿಗೆ ಪೈರು ಸಿದ್ಧವಾಗುತ್ತದೆ. ಈ ಅವಧಿಯೊಳಗೆ ನಾಟಿ ಪೂರ್ಣಗೊಳಿಸಿದರೆ ಉತ್ತಮ ಇಳುವರಿ ಸಿಗುತ್ತದೆ. ಆದರೆ, ಕೆಲವು ರೈತರ ಭತ್ತದ ಪೈರು 30ರಿಂದ 40 ದಿನ ಪೂರ್ಣಗೊಳಿಸಿದೆ. ಈ ಅವಧಿಯ ಬಲಿತ ಪೈರು ಾಟಿ ಮಾಡಲು ರೈತರು ಸಿದ್ಧರಿದ್ದರೂ ಸ್ಥಳೀಯವಾಗಿ ಕೂಲಿಯಾಳುಗಳು ಸಿಗುತ್ತಿಲ್ಲ.

ದೂರದ ಊರುಗಳಿಂದ ಕೂಲಿಯಾಳುಗಳನ್ನು ಕರೆದುತಂದು ನಾಟಿ ಮಾಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರ ಊರುಗಳಿಂದ ಬರುವ ಕೃಷಿ ಕಾರ್ಮಿಕರಿಗೆ ಅವರ ಕೇಳಿದಷ್ಟು ಹಣ ನೀಡದೆ ರೈತರಿಗೆ ಬೇರೆ ದಾರಿ ಇಲ್ಲದಂತಾಗಿದೆ. ಹೋಬಳಿ ಕೇಂದ್ರದಿಂದ ಕನಿಷ್ಠ 20ರಿಂದ 25 ಕಿ.ಮೀ. ದೂರವಿರುವ ಗ್ರಾಮಗಳಿಂದ ಸಾರಿಗೆ ವೆಚ್ಚ ಭರಿಸಿ ಕೂಲಿಯಾಳುಗಳನ್ನು ಕರೆತರುವ ಪ್ರಯತ್ನ ನಡೆದಿದೆ. ಬೆರಳೆಣಿಕೆಯಷ್ಟು ರೈತರು ಮಾತ್ರ ಯಂತ್ರದ ಮೂಲಕ ನಾಟಿ ಮಾಡುತ್ತಿದ್ದಾರೆ. ಬಹುತೇಕವಾಗಿ ಕೂಲಿಯಾಳುಗಳ ಮೂಲಕವೇ ನಾಟಿ ಮಾಡಿಸಲು ರೈತರು ಬಯಸಿರುವ ಪರಿಣಾಮ ಸಮಸ್ಯೆ ಎದುರಾಗಿದೆ.

ನಾಗವಳ್ಳಿ, ಕಾಗಲವಾಡಿ, ನಲ್ಲೂರು, ಯರಗಂಬಳ್ಳಿ, ಗುಂಬಳ್ಳಿ ಭಾಗದಿಂದ ಪ್ರತಿನಿತ್ಯವೂ ಮಹಿಳೆಯರನ್ನು ಕರೆದುತಂದು ಪೈರು ನಾಟಿ ಮಾಡಿಸಲಾಗುತ್ತಿದೆ. ಆದರೆ, ದಿನದ ಕೂಲಿಗೆ ಯಾರೊಬ್ಬರು ಒಪ್ಪುತ್ತಿಲ್ಲ.

ಬದಲಾಗಿ ಗುತ್ತಿಗೆ ಪದ್ಧತಿ ಚಾಲ್ತಿ ಬಂದಿದೆ. ನಾಲ್ಕೈದು ಮಹಿಳೆಯರಿರುವ ತಂಡಕ್ಕೆ 1 ಎಕರೆಗೆ ಪೈರು ನಾಟಿ ಮಾಡಲು 1,500 ರೂನಿಂದ 2 ಸಾವಿರ ರೂವರೆಗೆ ಕೂಲಿ ನೀಡಬೇಕು. ಜತೆಗೆ, ತಿಂಡಿ, ಊಟ, ಸಾರಿಗೆ ವೆಚ್ಚ ಭರಿಸಬೇಕಿದೆ. ಕಳೆದ ವರ್ಷ ಕನಿಷ್ಠ ದಿನಗೂಲಿ 100 ರೂ ಇತ್ತು. ಈಗ ದುಬಾರಿಯಾಗಿರುವುದರಿಂದ ರೈತರು ದಿಕ್ಕೆಡುವಂತಾಗಿದೆ.

`ಈ ಹಿಂದೆ ನಾಟಿ ಮಾಡಲು ಮಹಿಳೆಯರು ಉತ್ಸಾಹ ತೋರುತ್ತಿದ್ದರು. ಜಾನಪದ ಗೀತೆ ಹಾಡಿಕೊಂಡು ಪೈರು ನಾಟಿ ಮಾಡುವ ಕಾಲವೂ ಇತ್ತು. ಈಗ ಎಲ್ಲವೂ ಬದಲಾಗಿದೆ. ಸಿದ್ಧಉಡುಪು ತಯಾರಿಕೆಯ ಕೆಲಸಕ್ಕೆ ಮಹಿಳೆಯರು ಮಾರುಹೋಗಿದ್ದಾರೆ. ಹೀಗಾಗಿ, ಪಟ್ಟಣ ಪ್ರದೇಶಗಳತ್ತ ಮುಖ ಮಾಡಿದ್ದಾರೆ. ವಯಸ್ಸಾದ ಹೆಂಗಸರು ಮಾತ್ರ ಭತ್ತದ ಪೈರಿನ ನಾಟಿ ಕಾರ್ಯಕ್ಕೆ ಬರುತ್ತಾರೆ. ಹೀಗಾಗಿ, ನಿಗದಿತ ಅವಧಿಯೊಳಗೆ ನಾಟಿ ಕಾರ್ಯ ಪೂರ್ಣಗೊಳ್ಳುತ್ತಿಲ್ಲ~ ಎನ್ನುತ್ತಾರೆ ಕಮರವಾಡಿ ರೈತ ನಾಗೇಂದ್ರಸ್ವಾಮಿ.

ಪ್ರಸ್ತುತ ಭತ್ತಕ್ಕೆ ವೈಜ್ಞಾನಿಕ ಬೆಲೆ ಸಿಗು ತ್ತಿಲ್ಲ. ಇನ್ನೊಂದೆಡೆ ಕೂಲಿಯಾಳು ವೆಚ್ಚ ದುಬಾರಿಯಾಗಿದೆ. ಇದರ ಪರಿಣಾಮ ಕೃಷಿ ವೆಚ್ಚ ಹೆಚ್ಚುತ್ತಿದೆ. ಸೂಕ್ತ ಬೆಲೆ ಸಿಗದೆ ತೊಂದರೆ ಅನುಭವಿಸುವಂತಾಗಿದೆ ಎಂಬುದು ಅವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.