ADVERTISEMENT

ಕೃಷಿ ಬೆಲೆ ಆಯೋಗ ರಚನೆಗೆ ನಿರ್ಧಾರ

ಸಹಕಾರ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 6:41 IST
Last Updated 6 ಮಾರ್ಚ್ 2014, 6:41 IST

ಗುಂಡ್ಲುಪೇಟೆ: ರೈತನು ಬೆಳೆದ ಬೆಲೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮತ್ತು ವೈಜ್ಞಾನಿಕ ಬೆಲೆ ಕಲ್ಪಿಸಲು ರಾಜ್ಯ ಸಚಿವ ಸಂಪುಟಸಭೆ ಕೃಷಿ ಬೆಲೆ ಆಯೋಗವನ್ನು ರಚಿಸಲು ತೀರ್ಮಾನಿಸಿದೆ ಎಂದು ಸಹಕಾರ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ,  ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸರ್ಕಾರಿ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ನಡೆದ ‘ಜಿಲ್ಲಾ ಕೃಷಿ ಉತ್ಸವ’ ಸಮಾರೋಪ ಸಮಾರಂಭದಲ್ಲಿ  ಅವರು ಮಾತನಾಡಿದರು. ರೈತನೇ ಬೆಲೆ ನಿರ್ಧರಿಸುವ ಇಂಥಹ ಯೋಜನೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಯಾಗುತ್ತಿದೆ. ಎಲ್ಲಾ ಎಪಿಎಂಸಿ ಗಳಲ್ಲಿ ಗೋದಾಮು ನಿರ್ಮಿಸಲಾಗುವುದು ಎಂದರು.

ರೈತರು ಪ್ರಚಲಿತ ದಿನಗಳಲ್ಲಿ ಇಸ್ರೇಲ್‌ ಮಾದರಿಯ ಕೃಷಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು. ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಯುವಕರಿಗೆ ಪ್ರೇರಣೆ ನೀಡುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ಮನವಿ ಮಾಡಿದ ಅವರು, ಮಾರುಕಟ್ಟೆ ವ್ಯವಸ್ಥೆಯನ್ನು ಬದಲಾಯಿಸಲು ಇಂಥಹ ಸಂಸ್ಥೆಗಳು ಬೆಂಬಲ ನೀಡಬೇಕು. ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.

ಪಡಗೂರು ಅಡವಿ ಮಠದ ಶಿವಲಿಂಗೇಂದ್ರ ಸ್ವಾಮೀಜಿ, ತಾ.ಪಂ. ಅಧ್ಯಕ್ಷೆ ಪ್ರೇಮಾ ಸದಾಶಿವಪ್ಪ, ಕೃಷಿ ಉತ್ಸವ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ಎಸ್. ಮಹೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾಗೇಂದ್ರ, ಪಿ. ಮಹದೇವಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೋಮಲ, ಕಣ್ಣೇಗಾಲ ಸ್ವಾಮಿ, ನಾಗಮಲ್ಲಪ್ಪ, ಜ್ಯೋತಿ ಕುಮಾರಸ್ವಾಮಿ, ಪುರಸಭಾ ಸದಸ್ಯರಾದ ಚಂದ್ರಪ್ಪ, ವೆಂಕಟಾಚಲ, ನಾಗೇಂದ್ರ, ಶಶಿಧರ್‌, ಸಹಕಾರಿ ಮಂಡಳದ ಮಾಜಿ ನಿರ್ದೇಶಕ  ಮಡಿವಾಳಪ್ಪ, ಹಾಪ್‌ಕಾಮ್ಸ್‌ ಅಧ್ಯಕ್ಷ ಕುಮಾರಸ್ವಾಮಿ, ಕೊಡಸೋಗೆ ಮಧು, ಧರ್ಮಸಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೆನ್ನಕೇಶವ, ತಹಶೀಲ್ದಾರ್‌ ರಂಗನಾಥ್‌, ಪತ್ರಕರ್ತ ಸೋಮಶೇಖರ್‌, ಜಿಲ್ಲಾ ಯೋಜನೆಯ ನಿರ್ದೇಶಕ ಬಿ. ಗಣೇಶ್, ಸಮಿತಿಯ ಜಿ.ಕೆ. ಲೋಕೇಶ್, ಚಿದಾನಂದ ಹಾಗೂ ಧರ್ಮಸ್ಥಳ  ಸಂಘದ ಮಹಿಳೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.