ADVERTISEMENT

ಕ್ಯಾಮೆರಾ ಟ್ರ್ಯಾಪಿಂಗ್ ಅಳವಡಿಕೆ

ಬಂಡೀಪುರ ವ್ಯಾಪ್ತಿಯಲ್ಲಿ ಹುಲಿ ಗಣತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 9:21 IST
Last Updated 14 ಜೂನ್ 2013, 9:21 IST

ಗುಂಡ್ಲುಪೇಟೆ: ಬಂಡೀಪುರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿ ಮತ್ತು ವನ್ಯಜೀವಿಗಳ ಸಂತತಿ ಕಡಿಮೆಯಾಗುತ್ತಿದ್ದು, ಇದನ್ನು ತಡೆಗಟ್ಟುವ ಬಗ್ಗೆ ನಿಗಾ ಇಡಲು ಶೀಘ್ರದಲ್ಲೇ ಕ್ಯಾಮೆರಾ ಟ್ರ್ಯಾಪಿಂಗ್ ಯೋಜನೆ ಅಳವಡಿಸುವುದಾಗಿ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ. ಕಾಂತರಾಜು ತಿಳಿಸಿದರು.

ತಾಲ್ಲೂಕಿನ ಬಂಡೀಪುರದಲ್ಲಿ ನೇಚರ್ ಕನ್ಸರ್ವೇಶನ್ ಫೌಂಡೇಷನ್ ಮತ್ತು ಬಂಡೀಪುರ ವಲಯ ಅರಣ್ಯ ಇಲಾಖೆ ವತಿಯಿಂದ ಮೈಸೂರು ಮತ್ತು ಕೇರಳ ರಾಜ್ಯದ ವೈನಾಡು ಜಿಲ್ಲೆಯ ಪತ್ರಕರ್ತರಿಗಾಗಿ ಏರ್ಪಡಿಸಿದ್ದ ವನ್ಯಜೀವಿ ಸಂರಕ್ಷಣಾ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು. ವನ್ಯಜೀವಿಗಳ ಸಂತತಿ ಇಳಿಮುಖವಾಗುತ್ತಿದೆ. ಇದನ್ನು ತಡೆಗಟ್ಟಲು ಸಿ.ಸಿ ಕ್ಯಾಮೆರಾ ಖರೀದಿಸಲು ರೂ 25 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.

ಮನುಷ್ಯರು ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷದಿಂದ ಸಾವುನೋವು ಸಂಭವಿಸುತ್ತಿವೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಕಳೆದ ವರ್ಷ 23 ಆನೆಗಳು ಮೃತಪಟ್ಟಿವೆ. 2013ರ ಮೂರು ತಿಂಗಳಲ್ಲೇ 27 ಆನೆಗಳು ಸಾವನ್ನಪ್ಪಿವೆ ಎಂದು ವಿವರಿಸಿದರು.
ಸೋಲಾರ್ ತಂತಿ ಅಳವಡಿಕೆ ಮತ್ತು ಕಂದಕ ನಿರ್ಮಿಸಲಾಗಿದ್ದರೂ, ನೀರು ಮತ್ತು ಆಹಾರ ಅರಸಿ ವನ್ಯ ಜೀವಿಗಳು ನಾಡಿನತ್ತ ಮುಖ ಮಾಡುತ್ತಿವೆ. ಇದನ್ನು ತಡೆಯಲು ತಾತ್ಕಾಲಿಕ ನೀರಿನ ಟ್ಯಾಂಕ್‌ಗಳ ನಿರ್ಮಿಸಲಾಗುತ್ತಿದೆ ಹಾಗೂ ಕಂದಕಗಳ ಗಾತ್ರ ಹೆಚ್ಚಿಸಲಾಗುತ್ತಿದೆ ಎಂದರು.

ಕಾಡಿನ ಬೆಂಕಿ ಸಂಪೂರ್ಣವಾಗಿ ಮಾನವರಿಂದಲೇ ಸೃಷ್ಟಿಯಾಗುವಂತಹದ್ದು, ಕಾಡೆಮ್ಮೆ ಮತ್ತು ಹುಲಿ ಚರ್ಮಕಳ್ಳರು ಅಥವಾ ನಮ್ಮ ಇಲಾಖೆಯಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡು ತೆಗೆದುಹಾಕಿದ ಸಿಬ್ಬಂದಿಯಿಂದ ಇದು ಸೃಷ್ಟಿಯಾಗುವ ಸಂಭವ ಹೆಚ್ಚು ಎಂದು ತಿಳಿಸಿದರು.

ನೇಚರ್ ಕನ್ಸ್‌ರ್ವೇಶನ್ ಫೌಂಡೇಷನ್ ಸಂಸ್ಥಾಪಕ ಮತ್ತು ನಿರ್ದೇಶಕ ಸಂಜಯ್ ಗುಬ್ಬಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹುಲಿ ಗಣತಿ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಾಯೋಗಿಕ ಉಪನ್ಯಾಸ ನೀಡಿದರು.

ಸಂಸ್ಥೆಯ  ಸ್ವಯಂ ಸೇವಕರಾದ ಹರೀಶ್, ಪೂರ್ಣೇಶ, ಪ್ರಜ್ಞಾ, ಸರೋಜಾ, ಅನ್ನಪೂರ್ಣ, ಅಭಿಷೇಕ್, ಅರುಣ್ ಸಿಂಹ ಹಾಗೂ ಬೆಂಗಳೂರು, ಮೈಸೂರು ಮತ್ತು ವೈನಾಡು ಜಿಲ್ಲೆಯ ವಿವಿಧ ಪತ್ರಿಕೆಗಳ ವರದಿಗಾರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.