ADVERTISEMENT

ಗಂಜಿಕೇಂದ್ರ ತೆರೆಯಲು ಸಕಲ ಸಿದ್ಧತೆ

ಕೊಳ್ಳೇಗಾಲ ತಾಲ್ಲೂಕಿನ ಹಲವೆಡೆ ನೆರೆ ಭೀತಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 6:44 IST
Last Updated 4 ಆಗಸ್ಟ್ 2013, 6:44 IST

ಕೊಳ್ಳೇಗಾಲ: ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಂದ ಹೆಚ್ಚುವರಿ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇರುವುದರಿಂದ ಕಾವೇರಿ ನದಿ ತಟದ ಗ್ರಾಮಗಳ ಜನರಿಗಾಗಿ ಗಂಜಿಕೇಂದ್ರಗಳನ್ನು ತೆರೆಯಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದು ತಹಶೀಲ್ದಾರ್ ಮಾಳಿಗಯ್ಯ ತಿಳಿಸಿದರು.

ತಾಲ್ಲೂಕಿನ ದಾಸನಪುರ, ಹಳೇ ಅಣಗಳ್ಳಿ, ಹಳೇ ಹಂಪಾಪುರ, ಹರಳೆ ಗ್ರಾಮಗಳ ವ್ಯಾಪ್ತಿಯ ಜಮೀನುಗಳು ಜಲಾವೃತಗೊಂಡಿದ್ದು, ಶನಿವಾರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಯಡಕುರಿಯ ಗ್ರಾಮಗಳ ಜನರಿಗೆ ಸತ್ತೇಗಾಲ ಅಗ್ರಹಾರ ಶಾಲೆಯಲ್ಲಿ ಹಾಗೂ ದಾಸನಪುರ, ಹಳೇ ಅಣಗಳ್ಳಿ, ಹಳೇ ಹಂಪಾಪುರ ಗ್ರಾಮಗಳ ಜನರಿಗೆ ಕೊಳ್ಳೇಗಾಲ ಪಟ್ಟಣದಲ್ಲಿ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗಿದೆ. ಸಂತ್ರಸ್ತರಿಗಾಗಿ ಶಾಲೆ, ವಿದ್ಯಾರ್ಥಿನಿಲಯಗಳನ್ನು ಸಜ್ಜುಗೊಳಿಸಲಾಗಿದೆ.

ಈಗಾಗಲೇ ದಾಸನಪುರ ನೀರಿನಿಂದ ಆವೃತವಾಗಿದೆ. ನೀರಿನ ಹೆಚ್ಚಳದ ಬಗ್ಗೆ ಕ್ಷಣಕ್ಷಣಕ್ಕೆ ಮಾಹಿತಿ ನೀಡುವಂತೆ ಕಬಿನಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೆರೆಯಿಂದ ಜನರನ್ನು ರಕ್ಷಿಸಲು ಬೋಟ್ ಮತ್ತು ವಾಹನ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗಂಜಿ ಕೇಂದ್ರಕ್ಕೆಆಹ್ವಾನಿಸಿದ ತಕ್ಷಣ ಜನರು ಬರಲು ಸಜ್ಜಾಗಬೇಕು ಎಂದು ಅವರು ಸೂಚಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.