ADVERTISEMENT

ಗಣಿಗನೂರು: ದೇಗುಲಕ್ಕೆ ದಾರಿ ಯಾವುದಯ್ಯ ?

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 9:00 IST
Last Updated 21 ಮಾರ್ಚ್ 2012, 9:00 IST

ಯಳಂದೂರು: `ಇಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾದ ಸಾವಿರಾರು ವರ್ಷ ಹಳೆಯದಾದ ಐತಿಹಾಸಿಕ `ನೀಲಕಂಠೇಶ್ವರ~ ದೇಗುಲವಿದೆ.  ಈಚಿನ ವರ್ಷಗಳಲ್ಲಿ ಧರ್ಮಸ್ಥಳದ ಟ್ರಸ್ಟ್ ವತಿಯಿಂದ ಇದರ ಜೀರ್ಣೋದ್ಧಾರವೂ ಆಗಿ ವೀರೇಂದ್ರ ಹೆಗ್ಗಡೆ ಇದನ್ನು ಉದ್ಘಾಟಿಸಿಯೂ ಆಗಿದೆ. ವರ್ಷಕ್ಕೊಮ್ಮೆ ಇಲ್ಲಿ ಹಬ್ಬವೂ ನಡೆಯುತ್ತದೆ. ಆದರೆ ಇಲ್ಲಿಗೆ ತೆರಳಲು ಸೇತುವೆಯೇ ಇಲ್ಲ!

ಹೌದು, ಇದು ತಾಲ್ಲೂಕಿನ ಐತಿಹಾಸಿಕ ಗಣಿಗನೂರು ಗ್ರಾಮದ ಕಥೆ. ಇಲ್ಲಿರುವ ನೀಲಕಂಠೇಶ್ವರ ದೇಗುಲದ ಜೀರ್ಣಾದ್ಧಾರವಾಗಿ ಹಲವು ವರ್ಷಗಳೇ ಕಳೆದಿವೆ. ದಿನನಿತ್ಯ ಇಲ್ಲಿ ಪೂಜೆ ನಡೆಯುತ್ತದೆ. ಇಲ್ಲಿಗೆ ತೆರಳಲು ದೊಡ್ಡ ದೊಡ್ಡ ಸಿಮೆಂಟ್ ಪೈಪ್‌ಗಳನ್ನು ನದಿಗೆ ಅಡ್ಡಲಾಗಿ ಹಾಕಲಾಗಿದೆ. ಆದರೆ ನದಿ ತುಂಬಿ ಹರಿಯುವಾಗ ಇದನ್ನು ದಾಟಿ ಹೋಗಲು ಕಷ್ಟವಾಗುವುದರಿಂದ ಇದು ಸಂಪರ್ಕವನ್ನೇ ಕಳೆದುಕೊಳ್ಳುತ್ತದೆ.

ಈ ಬಗ್ಗೆ ಜನಪ್ರತಿನಿಧಿಗಳು ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರೂ ಇನ್ನೂ ಈಡೇರಿಲ್ಲ. ಗ್ರಾಮದ ಚರಂಡಿ ನೀರೂ ಸಹ ಇಲ್ಲಿಗೆ ಬಂದು ಬೀಳುವುದರಿಂದ ಇದನ್ನೇ ದಾಟಿ ದೇಗುಲ ದರ್ಶನ ಮಾಡಬೇಕಾದ ಅನಿವಾರ್ಯತೆ ಇದೆ ಎಂಬುದಾಗಿ ಗ್ರಾಮದ ಜಿ.ಬಿ. ಚಂದ್ರಶೇಖರ್, ಜಯಣ್ಣ ದೂರುತ್ತಾರೆ.

ಗ್ರಾಮದ ಕೆಲವು ರಸ್ತೆಗಳಿಗೆ ಮಣ್ಣನ್ನು ಸುರಿಯಲಾಗಿದ್ದು, ಮಳೆಗಾಲದಲ್ಲಿ ಕೊಚ್ಚೆಗಳಾಗಿ ಮಾರ್ಪಡುತ್ತವೆ. ಹೊಸ ಬಡಾವಣೆಯ ನೀರಿನ ತೊಂಬೆ ಕೇವಲ ಸ್ಮಾರಕವಾಗಿ ನಿಂತಿದೆ. ಜತೆಗೆ ಕುಡಿಯುವ ನೀರಿನ ಅಭಾವವೂ ಇದೆ. ಈಚೆಗೆ ಶಾಸಕ ಜಿ.ಎನ್. ನಂಜುಂಡಸ್ವಾಮಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಆದರೆ ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಮುಂದಾಗಲಿ ಎಂಬುದು ಇಲ್ಲಿನ ನಿವಾಸಿಗಳ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.