ADVERTISEMENT

ಗಮನ ಸೆಳೆದ ‘ಪ್ರಕೃತಿ’ ವಿದ್ಯಾರ್ಥಿ !

ಎನ್.ಮಂಜುನಾಥಸ್ವಾಮಿ
Published 21 ಡಿಸೆಂಬರ್ 2013, 9:49 IST
Last Updated 21 ಡಿಸೆಂಬರ್ 2013, 9:49 IST

ಯಳಂದೂರು: ಕೈ-–ಕಾಲು, ಮೈ ಸುತ್ತಿಕೊಂಡಿರುವ ಗಿಡಬಳ್ಳಿಗಳು ಇದರ ನಡುವೆ ಹರಿಯುವ ನದಿಗಳು, ಸುಂದರ ಜರಿಗಳು ಕತ್ತಿನ ಬಳಿ ಮರವನ್ನು ಕೊಯ್ದಿರುವ ಗುರುತುಗಳು, ಇದನ್ನು ಸುಂದರವಾಗಿಡಿ ಕಡಿಯಬೇಡಿ ಎಂದು ವ್ಯಘ್ರ ರೂಪ ತಾಳುವ ವಿದ್ಯಾರ್ಥಿಯ ಭಾವಗಳು...

ಇವು ಈಚೆಗೆ ಪಟ್ಟಣದಲ್ಲಿ ನಡೆದ ಕ್ಲಸ್ಟರ್‌ ಹಾಗೂ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಆದರ್ಶ ಶಾಲೆಯ ವಿದ್ಯಾರ್ಥಿ ಮೂಡಿಸಿದ ಪ್ರಕೃತಿ ಬಗೆಗಿನ ಕಾಳಜಿ ಮೂಡಿಸುವ ಸುಂದರ ಚಿತ್ರಗಳ ಪುಟ್ಟ ಝಲಕ್‌.

ಇಲ್ಲಿನ ಚಿತ್ರಕಲಾ ಶಿಕ್ಷಕ ಸಿ. ದುಂಡಮಹದೇವಸ್ವಾಮಿ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆಗೆ ಅಣಿಗೊಳಿಸಲು ಬೇರೆ ಧಿರಿಸು ಧರಿಸುವ ಬದಲು ಅವರ ಮೈಯನ್ನೇ ಚಲಿಸುವ ಪ್ರಕೃತಿಯಾಗಿ ಮಾರ್ಪಡಿಸಿದ್ದರು. ಇದರಿಂದ ಸಮಾಜಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಮೂಡಿಸುವ ಕೆಲಸವನ್ನು ಮಾಡಿದ್ದು ನಿಜಕ್ಕೂ ನೆರೆದಿದ್ದ ಇತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ತೀರ್ಪುಗಾರರಿಗೆ ಬೆರಗು ಮೂಡಿಸಿದ್ದು ಸತ್ಯ.

ಅದರಲ್ಲೂ ಪರಿಸರ ರಕ್ಷಣೆಯನ್ನು ಮಾಡಿದರೆ ಮುಂದೊಂದು ದಿನ ಸ್ವರ್ಗದ ಬಾಗಿಲು ತೆರೆದು ಅದರ  ಮೆಟ್ಟಿಲುಗಳು ಸಿಗುತ್ತದೆ ಎಂಬ ತ್ರೀಡಿ ಚಿತ್ರ ನೋಡುಗರ ಮನಸೆಳೆಯಿತು.

‘ಗ್ರಾಮೀಣ ಭಾಗದಲ್ಲಿ ಬೆಳೆದ ಹುಡುಗ ನಾನಾಗಿದ್ದೇನೆ. ಪರಿಸರ ಅಧ್ಯಯನವನ್ನೂ ದಿನ ಓದುವ ನಾನು. ನಿತ್ಯವೂ ನನ್ನ ಸುತ್ತಲ ಪರಿಸರವನ್ನೇ  ನೋಡಿ ಖುಷಿ ಪಡುತ್ತೇನೆ. ನನಗೆ ನನ್ನ ದೇಹದ ಮೇಲೆ ಶಿಕ್ಷಕರು ಮೂಡಿಸಿದ ವರ್ಣಚಿತ್ರ ಒಂದೆಡೆ ಮನಸ್ಸಿಗೆ ಹಿತವೆನಿಸಿದರೆ ಮತ್ತೊಂದೆಡೆ ಪರಿಸರ ರಕ್ಷಣೆಯಲ್ಲಿ ನಾನು ಸಮಾಜಕ್ಕೆ ಒಳ್ಳೆ ಸಂದೇಶವನ್ನು ನೀಡಿದೆ ಎಂಬ ಖುಷಿ ಇದೆ’ ಎಂಬುದು ಅದರ್ಶ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಶ್ರೀಧರಮೂರ್ತಿ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.