ADVERTISEMENT

ಗುಂಡ್ಲುಪೇಟೆಯಲ್ಲಿ ಖಾತೆ ತೆರೆದ ಬಿಜೆಪಿ

ಸತತ ಸೋಲಿನಿಂದ ಹೊರ ಬಂದ ಸಿ.ಎಸ್.ನಿರಂಜನಕುಮಾರ್, ಮುಗ್ಗರಿಸಿದ ಮೋಹನಕುಮಾರಿ

​ಪ್ರಜಾವಾಣಿ ವಾರ್ತೆ
Published 16 ಮೇ 2018, 10:41 IST
Last Updated 16 ಮೇ 2018, 10:41 IST
ಗುಂಡ್ಲುಪೇಟೆಯಲ್ಲಿ  ಖಾತೆ ತೆರೆದ ಬಿಜೆಪಿ
ಗುಂಡ್ಲುಪೇಟೆಯಲ್ಲಿ ಖಾತೆ ತೆರೆದ ಬಿಜೆಪಿ   

ಚಾಮರಾಜನಗರ/ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದೆ. ಇಲ್ಲಿಯವರೆಗಿನ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದೆ. ಕುಟುಂಬ ರಾಜಕಾರಣದಿಂದ ಕ್ಷೇತ್ರವನ್ನು ಹೊರಗೆ ತರುವಲ್ಲಿ ನಿರಂಜನಕುಮಾರ್ ಕೊನೆಗೂ ಸಫಲರಾಗಿದ್ದಾರೆ.

ಕ್ಷೇತ್ರದಲ್ಲಿ 7 ಬಾರಿ ಕೆ.ಎಸ್.ನಾಗರತ್ನಮ್ಮ ಹಾಗೂ 5 ಬಾರಿ ಎಚ್.ಎಸ್. ಮಹದೇವಪ್ರಸಾದ್ ಸತತ ಆಯ್ಕೆಯಾಗಿದ್ದರು. ಒಂದು ಕುಟುಂಬಕ್ಕೆ ಗೆಲುವು ನೀಡಿದರೆ ಅವರು ಇರುವವರೆಗೂ ಗೆಲುವು ತಂದು ಕೊಡುವುದು ಕ್ಷೇತ್ರದ ಜನರು ಮೊದಲಿನಿಂದ ನಡೆಸಿಕೊಂಡ ಸಂಪ್ರದಾಯ. ಒಮ್ಮೆ ಮಾತ್ರ ಎಚ್.ಕೆ.ಶಿವರುದ್ರಪ್ಪ ಗೆಲುವು ಸಾಧಿಸಿ ದ್ದರು. ಇವರನ್ನು ಬಿಟ್ಟರೆ ಎಲ್ಲ ಗೆಲುವುಗಳು ನಾಗರತ್ನಮ್ಮ ಹಾಗೂ ಮಹದೇವಪ್ರಸಾದ್ ಅವರ ಮಧ್ಯೆಯೇ ಹಂಚಿಕೆಯಾಗತ್ತು. ‘ಇತಿಹಾಸ ಮರುಕಳಿಸುತ್ತದೆ’ ಎಂಬ ಕಾಂಗ್ರೆಸ್‌ನ ನಂಬಿಕೆ ಈ ಬಾರಿ ಫಲಿಸಲಿಲ್ಲ.

ಉಪಚುನಾವಣೆಯಲ್ಲಿ ಬಂದ ಸ್ಟಾರ್ ಪ್ರಚಾರಕರು ಯಾರೂ ಕಾಂಗ್ರೆಸ್‌ನ ಮೋಹನಕುಮಾರಿ ಅವರ ಬೆಂಬಲಕ್ಕೆ ಬರಲಿಲ್ಲ. ಇದು ಅವರು ಪಾಲಿಗೆ ದೊಡ್ಡ ಮೈನಸ್ ಪಾಯಿಂಟ್ ಎನಿಸಿತು. ಆದರೆ, ಅಚ್ಚರಿ ಎಂದರೆ ಉಪಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಇಲ್ಲಿಯೇ ಬೀಡುಬಿಟ್ಟು ಪ್ರಚಾರ ನಡೆಸಿದರೂ ಗೆಲುವು ಪಡೆಯದ ನಿರಂಜನಕುಮಾರ್ ಈ ಬಾರಿ ಯಡಿಯೂರಪ್ಪ ಕ್ಷೇತ್ರಕ್ಕೆ ಬಾರದಿದ್ದರೂ ಗೆಲುವು ಪ‍ಡೆದಿದ್ದಾರೆ.

ADVERTISEMENT

ಈ ಬಾರಿ ನಿರಂಜನಕುಮಾರ್ ಅವರು ಸತತ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಂಡಿದ್ದು ವಿಶೇಷ ವಾಗಿತ್ತು. ಪ್ರಚಾರದಲ್ಲಿ ಕಾಂಗ್ರೆಸ್‌ ವಿರುದ್ಧದ ಟೀಕೆಗಿಗಿಂತ ಹೆಚ್ಚಾಗಿ ಸೋಲನ್ನೇ ಅಸ್ತ್ರವಾಗಿ ಪ್ರಯೋಗಿಸಿದರು. ಇವರ ಮಾತುಗಳಿಗೆ ಕರಗಿದ ಮತದಾರ ಇವರಿಗೆ ಗೆಲುವಿಗೆ ಮುನ್ನುಡಿ ಬರೆದಿದ್ದಾರೆ. ಇವರು ಆಯ್ಕೆಯಾದ ಅಂತರವೂ ವಿಶೇಷ ಎನಿಸಿದೆ. ಇವರು ಗಳಿಸಿದ 16,684 ಮತಗಳ ಅಂತರ ಜಿಲ್ಲೆಯಲ್ಲಿ ಪಡೆದ 2ನೇ ಅತಿದೊಡ್ಡ ಅಂತರ. ಎಚ್.ಎಸ್. ಮಹದೇವಪ್ರಸಾದ್ ಅವರು 1994ರಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿ 24,056 ಅಂತರದಿಂದ ಗೆದ್ದಿದ್ದರು, ಅಂದಿನಿಂದ ಇಂದಿನವರೆಗೆ ಯಾವ ಅಭ್ಯರ್ಥಿಯು ಇಷ್ಟು ಅಂತರದ ಬಹುಮತ ಪಡೆದ ಉದಾಹರಣೆಗಳಿಲ್ಲ.

ಗುಂಡ್ಲುಪೇಟೆ ಕ್ಷೇತ್ರದಲ್ಲೂ ಬಿಎಸ್‌ಪಿ 3ನೇ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. 6 ಸಾವಿರಕ್ಕೂ ಅಧಿಕ ಮತ ಗಳಿಸಿರುವ ಗುರುಪ್ರಸಾದ್ ಮುಂಬರುವ ಚುನಾವಣೆಗಳಿಗೆ ಇದನ್ನು ಮೆಟ್ಟಿಲಾಗಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.