ADVERTISEMENT

ಗುಣಮಟ್ಟದ ಸುದ್ದಿ ಪ್ರಕಟಿಸಿ: ಸಚಿವ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 6:58 IST
Last Updated 15 ಜುಲೈ 2013, 6:58 IST

ಚಾಮರಾಜನಗರ: `ಪ್ರಸ್ತುತ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿಸಲು ಪೈಪೋಟಿ ಏರ್ಪಟ್ಟಿದೆ. ಆದರೆ, ಸಮಾಜ ಹಿತದೃಷ್ಟಿಯಿಂದ ಗುಣಮಟ್ಟದ ಸುದ್ದಿ ಪ್ರಕಟಿಸುವುದು ಪತ್ರಕರ್ತರ ಜವಾಬ್ದಾರಿ ಯಾಗಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಹೇಳಿದರು.

ನಗರದ ವರ್ತಕರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.

ಪತ್ರಿಕೆಗಳಲ್ಲಿ ಬಿತ್ತರವಾಗುವ ಲೇಖನಗಳಿಗೆ ರಾಜಕೀಯ ಕ್ಷೇತ್ರದ ದಿಕ್ಕು ಬದಲಿಸುವ ಶಕ್ತಿ ಇದೆ. ದೃಶ್ಯ ಮಾಧ್ಯಮ ಕಾಲಿಟ್ಟ ನಂತರ ಸುದ್ದಿ ವೇಗವಾಗಿ ಪ್ರಚಲಿತವಾಗುತ್ತಿವೆ. ಪತ್ರಿಕೆಗಳು ಹೆಚ್ಚು ಪುಟ ನೀಡಿ ಸುದ್ದಿ ಪ್ರಕಟಿಸುವ ವೇಳೆ ಗುಣಮಟ್ಟದ ಸುದ್ದಿಗೆ ಒತ್ತು ನೀಡುತ್ತಿಲ್ಲ ಎಂದು ವಿಷಾದಿಸಿದರು.

ಮಾಧ್ಯಮಗಳ ಆರ್ಥಿಕ ಅಭಿವೃದ್ಧಿಗೆ ಜಾಹೀರಾತು ಪಡೆಯುವುದು ಸಹಜ. ಆದರೆ, ಸುದ್ದಿ ಪ್ರಕಟಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ವಿದ್ಯುನ್ಮಾನ ಮಾಧ್ಯಮಗಳು ಬಂದ ನಂತರ ಸುದ್ದಿಯ ಸ್ವರೂಪ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾರಂಗ ಕೂಡ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಿದೆ. ವ್ಯಕ್ತಿಗಳ ತೇಜೋವಧೆಗೆ ಸೃಷ್ಟಿಯಾಗಿರುವ ಪತ್ರಿಕೆಗಳನ್ನು ತಿರಸ್ಕರಿಸಬೇಕಿದೆ ಎಂದು ಹೇಳಿದರು.

ಪತ್ರಿಕಾ ರಂಗದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಭದ್ರತೆ ಇಲ್ಲ. ಇದಕ್ಕಾಗಿ ಯಶಸ್ವಿನಿ ಯೋಜನೆ ಸೇರಿದಂತೆ ಇತರೇ ಸೌಲಭ್ಯ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಸ್ತಾಪಿ ಸಿದ್ದಾರೆ. ಏಕರೂಪ ಜಾಹೀರಾತು ವ್ಯವಸ್ಥೆ ಜಾರಿಗೆ ಅಗತ್ಯ ಕ್ರಮಕೈಗೊಳ್ಳ ಲಾಗುವುದು ಎಂದರು.

ಸಂಸದ ಆರ್. ಧ್ರುವನಾರಾಯಣ ಮಾತನಾಡಿ, `ಎಲ್ಲ ಪತ್ರಕರ್ತರು ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ಆರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತದೆ. ಸತ್ಯ ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಸತ್ಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಪತ್ರಕರ್ತರು ಮಾಡಬೇಕಿದೆ. ಜತೆಗೆ, ಅಭಿವೃದ್ಧಿಗೆ ಪೂರಕವಾದ ಸುದ್ದಿ ಪ್ರಕಟಿಸಿ' ಎಂದು ಸಲಹೆ ನೀಡಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, `ವ್ಯಕ್ತಿಯ ವೈಯಕ್ತಿಕ ವಿಚಾರದ ಬಗ್ಗೆ ಬರೆಯುವಂತಹ ಪತ್ರಿಕೆಗಳಿಂದ ಸುದ್ದಿಯ ಮೌಲ್ಯ ಕುಸಿಯುತ್ತದೆ. ಇಂತಹ ಪೀತ ಪತ್ರಿಕೋದ್ಯಮಕ್ಕೆ ಕಡಿವಾಣ ಹಾಕಬೇಕು' ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಮಾತನಾಡಿ, `ವರದಿಗಾರಿಕೆ ಒಂದು ಜವಾಬ್ದಾರಿ ಯುತ ವೃತ್ತಿ. ಪತ್ರಕರ್ತರು ಸಾಮಾಜಿಕ ಬದಲಾವಣೆಯ ಏಜೆಂಟ್‌ರಂತೆ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬೇಕು. ಆರೋಗ್ಯಕರ ಸುದ್ದಿಗೆ ಒತ್ತು ನೀಡಬೇಕು' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಡಿಸಿಲ್ವ, ವರ್ತಕರ ಸಂಘದ ಅಧ್ಯಕ್ಷ ಎ. ಜಯಸಿಂಹ ಹಾಜರಿದ್ದರು. ಇದೇ ವೇಳೆ ಕೋಟಂಬಳ್ಳಿ ಗುರುಸ್ವಾಮಿ, ಪತ್ರಿಕಾ ಮಾರಾಟಗಾರ ಎಸ್. ರಮೇಶ್ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.