ADVERTISEMENT

ಗೆಣಸಿನ ಪೂಜೆಗೆ ಸೋಲಿಗರು ಸಜ್ಜು

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 8:50 IST
Last Updated 15 ಜನವರಿ 2012, 8:50 IST

ಯಳಂದೂರು: ಚಂಪಕಾರಣ್ಯ ಕ್ಷೇತ್ರ ಎಂದು ಹೆಸರುವಾಸಿಯಾದ ಬಿಳಿಗಿರಿ ರಂಗನ ಬೆಟ್ಟದಲ್ಲಿ ಉತ್ತರಾಯಣ ಸೌರ ಮಕರ ಮಾಸದ ಸಂಕ್ರಾಂತಿ ರಥೋತ್ಸವ ಜ.16 ಸೋಮವಾರ ಮಧ್ಯಾಹ್ನ 12-40 ರಿಂದ ಸಲ್ಲುವ ಶುಭ ಮೀನ ಲಗ್ನದಲ್ಲಿ ಸಂಭ್ರಮ ಸಡಗರದ ನಡುವೆ ನೆಡೆಯಲಿದೆ. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ತಾಲ್ಲೂಕು ಆಡಳಿತ ಭರದಿಂದ ಆಯೋಜಿಸಿದೆ. ಭೂ ದೇವಿಗೆ ಗೆಣಸಿನ ಪೂಜೆ ಸಲ್ಲಿಸುವ ಮೂಲಕ ಸೋಲಿಗರು ದೇವಳದ ಸೇವೆಗೆ ಮುಂದಾಗಿದ್ದಾರೆ.

ಬನದ ಎರಡೂ ಬದಿಯಲ್ಲಿ ಅರಳಿನಿಂತ ಬೈಸೆ ಹೂವಿನ ಪರಿಮಳ. ಇಳಿ ಜಡೆ ಬಿಟ್ಟು ಸ್ವಾಗತಿಸುವ ಕಕ್ಕೆ ಪುಷ್ಪ ಭಕ್ತರ ಸ್ವಾಗತಕ್ಕೆ ಕಾದು ನಿಂತಿವೆ. ಔಡಲ, ಗೆಡ್ಡೆಗೆಣಸು ಕಿತ್ತು ಪೋಡುಗಳಲ್ಲಿ ಅಲಂಕರಿಸುವ ಆಚರಣೆಯೂ ಇಂದಿನಿಂದಲೇ ಆರಂಭಗೊಳ್ಳುತ್ತದೆ.

ದೇವಾಲಯದ ಪೂರ್ವ ದಿಕ್ಕಿನಲ್ಲಿ ರಾಜಗೋಪುರ ನಿರ್ಮಾಣ ಪ್ರಗತಿಯಲ್ಲಿದೆ. ಅಂದಾಜು ರೂ. 2.22 ಲಕ್ಷಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ, ಭಕ್ತರ ನೀರಿನ ದಾಹ ನೀಗಿಸಲೂ ಹೆಚ್ಚುವರಿ ನಲ್ಲಿಗಳ ನಿರ್ಮಾಣ. ರಸ್ತೆಯ ಎರಡು ಬದಿಗಳಲ್ಲಿನ ಕೊರಕಲೂ ಮುಚ್ಚಿ ವ್ಯವಸ್ಥಿತ ಸಂಚಾರಕ್ಕೆ ಆದ್ಯತೆ. ತೇರಿಗೆ ಕುರುಜು ಕಟ್ಟಿ ಸಿಂಗರಿಸುವ ಕಾಯಕ ವನ್ನು ಸೋಲಿಗರೂ ವಹಿಸಿದ್ದಾರೆ.

ವಿಶೇಷ: ಪ್ರತಿ ವರ್ಷವೂ ಮಾಲೆ ತೊಟ್ಟ ರಂಗಪ್ಪನ ಭಕ್ತರೂ ದೊಡ್ಡ ಸಂಪಿಗೆ ಕಾಡಿನಲ್ಲಿ ಪೂಜಿಸುವ ಪದ್ಧತಿ ಇದೆ. ತೇರಿನ ದಿನದಂದು ವ್ರತ ಪೂರ್ಣಗೊಳಿಸಿ ದೇವರ ದರ್ಶನ ಪಡೆಯುತ್ತಾರೆ. ಅನ್ನ ದಾಸೋಹಕ್ಕೂ ಇಲ್ಲಿ ಅವಕಾಶ ಇದೆ. ಸಹಸ್ರಾರು ಜನರೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಾರೆ. ದೇವರೂ ರಂಗಪ್ಪನಾದರೂ ಶ್ವೇತಾದ್ರಿನಾಥನ ಹೆಸರಲ್ಲಿ ಧಾರ್ಮಿಕ ಆಚರಣೆಗಳೂ ಇಲ್ಲಿ ನಡೆಯುತ್ತವೆ. ಚಿಕ್ಕಜಾತ್ರೆ ದಿನದಂದು ಮಾತ್ರ ದೇವಸ್ಥಾನ ಸುತ್ತಿಬರುವ ತೇರು ಅಲ್ಲೇ ನಿಲ್ಲುತ್ತದೆ.

ಜಾತ್ರೆಗೆ ಕೆಎಸ್ಸಾರ್ಟಿಸಿ ವತಿಯಿಂದ ಪಟ್ಟಣದಿಂದ 100 ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಪಟ್ಟಣದ ಜಹಗೀರ‌್ದಾರ್ ಬಂಗಲೆ ಮುಂಭಾಗದಲ್ಲಿ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು ಪೂರೈಸಲು ಬೆಟ್ಟದಲ್ಲಿ ಕೆಟ್ಟು ನಿಂತಿರುವ ಕೈ ಪಂಪ್‌ಗಳು, ಮೋಟಾರ್‌ಗಳ ದುರಸ್ತಿ ಕಾರ್ಯ ಈಗಾಗಲೇ ನಡೆದಿದೆ. ಇದರ ಜೊತೆಗೆ 2 ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ. ಹಾಲಿ ಇರುವ ಶೌಚಾಲಯ ಬಳಸಲು ವ್ಯವಸ್ಥೆ ಮಾಡಲಾಗಿದೆ. ರಥದ ಬೀದಿ, ಕಲ್ಯಾಣಿ ಕೊಳ, ಪೋಡುಗಳಲ್ಲಿನ ಚರಂಡಿ ಸ್ವಚ್ಚಗೊಳಿಸಲಾಗಿದೆ.

ಹಬ್ಬದಂದು ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ವಹಿಸಲಾಗಿದೆ ಎಂದು ಇಓ ಚಿಕ್ಕಲಿಂಗಯ್ಯ `ಪ್ರಜಾವಾಣಿ~ ಗೆ ತಿಳಿಸಿದರು.

ನಿಷೇಧ: ಬಿಆರ್‌ಟಿ ಅಭಯಾರಣ್ಯ ಹುಲಿ ಯೋಜನೆಗೆ ಸೇರಿರುವುದರಿಂದ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆ ವರೆಗೆ ವಾಹನ ಸಂಚಾರ ನೀಷೇಧಿಸಿದೆ. ಸುಂದರ ಪ್ರಕೃತಿ ತಾಣವಾಗಿಸಲೂ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚಿಸಲಾಗಿದೆ. ವನ್ಯ ಪ್ರಾಣಿಗಳು ಕಂಡಾಗ ಅನಗತ್ಯ ಕಿರಿಕಿರಿ ಮಾಡದಂತೆ ಸಂಚಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.