ADVERTISEMENT

ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಅರ್ಜಿ

ಮೆಲ್ಲಹಳ್ಳಿ: ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 6:56 IST
Last Updated 28 ಡಿಸೆಂಬರ್ 2017, 6:56 IST
ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಅರ್ಜಿ
ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಅರ್ಜಿ   

ಯಳಂದೂರು: ಗೋಹತ್ಯೆ ನಿಷೇಧಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದಿರುವ ಅರ್ಜಿಗೆ ಪೋಷಕರಿಂದ ಸಹಿಮಾಡಿಸಿಕೊಂಡು ಬರುವಂತೆ ಸೂಚಿಸಿ ತಾಲ್ಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ಇರುವ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಈಚೆಗೆ ವಿತರಿಸಿರುವ ಕ್ರಮವನ್ನು ಖಂಡಿಸಿ ಮುಖ್ಯಶಿಕ್ಷಕ ಹಾಗೂ ಸಹಶಿಕ್ಷಕರೊಬ್ಬರನ್ನು ಪೋಷಕರು ಬುಧವಾರ ತರಾಟೆಗೆ ತೆಗೆದುಕೊಂಡರು.

ಕರ್ನಾಟಕದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಾಗಬೇಕು. ಗೋ ತಳಿಗಳ ಸಂವರ್ಧನೆಗೆ ಬೇಕಾದ ಎಲ್ಲ ಉಪಕ್ರಮಗಳನ್ನು ಕೈಗೊಳ್ಳಬೇಕು. ಇದನ್ನು ಮಾನ್ಯಮಾಡಲೇ ಬೇಕು ಎಂದು ಭಾರತೀಯ ಪ್ರಜೆಯಾಗಿ ಆಗ್ರಹಿಸುತ್ತೇನೆ ಎಂದು ಬರೆದಿರುವ ಅರ್ಜಿಯ ತಳಭಾಗದಲ್ಲಿ ನಮೂದಿಸಿರುವ ಸ್ಥಳದಲ್ಲಿ ವ್ಯಕ್ತಿಯ ಸಹಿ, ಹೆಸರು, ವಿಳಾಸವನ್ನು ಪೋಷಕರಿಂದ ತುಂಬಿಸಿಕೊಂಡು ಬರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು.

ವಿಷಯವನ್ನು ತಿಳಿದ ಪೋಷಕರು ಹಾಗೂ ದಲಿತ ಸಂಘರ್ಷ ಸಮಿತಿ ಸದಸ್ಯರು,ಪ್ರಗತಿಪರ ಸಂಘಟನೆಗಳ ಸದಸ್ಯರ ಜೊತೆಗೂಡಿ ಶಾಲೆಗೆ ಮುತ್ತಿಗೆ ಹಾಕಿ ಅರ್ಜಿ ವಿತರಿಸಿದ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕ ವಿರುದ್ಧ ಪ್ರತಿಭಟನೆ ನಡೆಸಿದರು.

ADVERTISEMENT

ಸಂಸದ ಯರಿಯೂರು ರಾಜಣ್ಣ ಮಾತನಾಡಿ, ‘ರಾಜ್ಯದಲ್ಲಿ ಕೋಮು ಸೌಹಾರ್ದವನ್ನು ಕದಡುವ ನಿಟ್ಟಿನಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಗೋಹತ್ಯೆ ಕಾಯ್ದೆಯಂತಹ ಸೂಕ್ಷ್ಮ ವಿಷಯಗಳನ್ನು ಮಕ್ಕಳಲ್ಲಿ ಬಿತ್ತುವ ಮೂಲಕ ಶಾಲಾ ವಾತಾವರಣ ವಾತಾವರಣ ಹಾಳು ಮಾಡುತ್ತಿದ್ದಾರೆ. ಅರ್ಜಿ ನೀಡಿದ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ವಹಸಿಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ‘ಶಿಕ್ಷಕರು ಅರ್ಜಿ ಬಗ್ಗೆ ಮಾಹಿತಿ ನೀಡಿಲ್ಲ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸಲಾಗುವುದು. ಇಂತಹ ಅರ್ಜಿ ವಿತರಿಸಿರುವ ವ್ಯಕ್ತಿಗಳ ಬಗ್ಗೆ ತಾಲ್ಲೂಕಿನ ಎಲ್ಲ ಶಿಕ್ಷಕರಿಗೂ ಮಾಹಿತಿ ನೀಡಲಾಗುವುದು’ ಎಂದು ಭರವಸೆ ನೀಡಿದರು. ನಂತರ ಅರ್ಜಿಗಳನ್ನು ವಾಪಸ್ಸು ಪಡೆದು ಸುಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.