ADVERTISEMENT

ಗ್ರಾಮಾಭಿವೃದ್ಧಿಗೆ ಶ್ರಮಿಸಿ: ಸಂಸದ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 9:05 IST
Last Updated 13 ಜುಲೈ 2012, 9:05 IST

ಚಾಮರಾಜನಗರ:  ಗ್ರಾಮ ಪಂಚಾಯಿತಿಗಳ ಆಡಳಿತ  ವಿಸ್ತಾರಗೊಳ್ಳುವ ಜತೆಗೆ, ಹೆಚ್ಚಿನ ಅಧಿಕಾರವೂ ಸಹ ದೊರೆತಿದೆ. ಇದನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಸಂಸದ ಆರ್.ಧ್ರುವನಾರಾಯಣ್ ಗುರುವಾರ ಎಂದು ತಿಳಿಸಿದರು.

ತಾಲ್ಲೂಕಿನ ಹರದನಹಳ್ಳಿ ಹೋಬಳಿಗೆ ಸೇರಿದ ದೊಡ್ಡಮೋಳೆ, ವೆಂಕಟಯ್ಯನಛತ್ರ, ಹೊನ್ನಹಳ್ಳಿ ಗ್ರಾಮಪಂಚಾಯಿತಿಗಳ ನೂತನ ಕಟ್ಟಡ ಹಾಗೂ ಸುವರ್ಣಗ್ರಾಮ ಯೋಜನೆಯಡಿ ಅಮಚವಾಡಿಯಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಮೂರು ಗ್ರಾಮ ಪಂಚಾಯಿತಿಗಳಿಗೆ ನೂತನ ಕಟ್ಟಡ ನಿರ್ಮಿಸಲಾಗಿದೆ. ಗ್ರಾಮ ಪಂಚಾಯಿತಿಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ದುಡಿಯುವ ಜತೆಗೆ ಗ್ರಾಮದ ಸ್ವಚ್ಛತೆಗೆ ಒತ್ತು ನೀಡಬೇಕು. ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆ, ಕಟ್ಟೆಗಳ ಸಂರಕ್ಷಣೆ, ಬೀದಿ ದೀಪಗಳ ಅಳವಡಿಕೆ, ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರು ಕಲ್ಪಿಸುವ ಜತೆಗೆ ಎಲ್ಲರಿಗೂ ಸಹ ಗುಣಮಟ್ಟದ ಶಿಕ್ಷಣ ಸಿಗುವಂತೆ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಜಿಲ್ಲೆಗೆ 1 ಕೋಟಿ ರೂ.ಗಳನ್ನು ನೀಡಿದ್ದು, ಇದರ ಸದ್ಬಳಕೆ ಆಗಲು ಗ್ರಾಮ ಪಂಚಾಯಿತಿ ಸಿಬ್ಬಂದಿ ಕ್ರಿಯಾಶೀಲರಾಗಬೇಕಿದೆ. ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ರೂ.8,200 ರೂ.ಗಳನ್ನು ನೀಡುತ್ತಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಾವೇರಿ ಶಿವಕುಮಾರ್, ಎ.ಸಿ.ರಾಜಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಜಡೆಯಪ್ಪ, ಉಪಾಧ್ಯಕ್ಷ ಮಹಾಲಿಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಿಕ್ಕಮಹದೇವು, ಲೋಕೇಶ್, ಕಾಂತಮಣಿ, ಚಿಕ್ಕಮಾದೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೊರೆಸ್ವಾಮಿ, ಶ್ರೀನಿವಾಸ್, ಚಿಕ್ಕಲಿಂಗಪ್ಪ, ವೆಂಕಟಚಲಂ, ಉಪಾಧ್ಯಕ್ಷರಾದ ಮುತ್ತುರಾಜ್, ಹೊಸೂರು ಅಶೋಕ್, ಧರ್ಮೇಂದ್ರ, ಮೈಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಂಕರ್‌ರಾಜ್, ಕಾರ್ಯ ನಿರ್ವಹಣಾಧಿಕಾರಿ ಜೈಕೃಷ್ಣ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.