ಯಳಂದೂರು: ತಾಲ್ಲೂಕಿನ ವೈ.ಕೆ.ಮೋಳೆಯಲ್ಲಿ ಸೋಮವಾರ ಸಂಜೆ ನಡೆದ ದೊಡ್ಡಮ್ಮತಾಯಿ, ಚಿಕ್ಕಮ್ಮತಾಯಿ ಹಾಗೂ ಚಾಮುಂಡೇಶ್ವರಿ ಕೊಂಡೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೂಂಡಿದ್ದರು.
ಗ್ರಾಮದ ಹೃದಯ ಭಾಗದಲ್ಲಿರುವ ದೇಗುಲದ ಮುಂದಿನ ಕೊಂಡದಲ್ಲಿ ಬೆಂಕಿಯನ್ನು ಹಾಕಲಾಗಿತ್ತು. ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ಸತ್ತಿಗೆ, ಸೂರಿಪಾನಿ ಹಾಗೂ ಉತ್ಸವ ಮೂರ್ತಿಗಳನ್ನು ಅದ್ದೂರಿ ಮೆರವಣಿಗೆ ಮೂಲಕ ತಂದು ಕೊಂಡದ ಬೆಂಕಿಯನ್ನು ಹಾಯಲಾಯಿತು.
ಹರಕೆ ಹೊತ್ತ ಭಕ್ತರು ತಮ್ಮ ಬಾಯಿಗೆ ಸರಳುಗಳನ್ನು ಚುಚ್ಚಿಸಿಕೊಂಡು, ಕೈಯಲ್ಲಿ ಎಣ್ಣೆಯ ದೀವಟಿಗೆ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಭಕ್ತರಿಗೆ ನೀರು, ಮಜ್ಜಿಗೆ, ಪಾನಕ ಹಾಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಗ್ರಾಮದ ಬೀದಿಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಬಿಳಿಗಿರಿರಂಗನಬೆಟ್ಟದಿಂದ ಸೋಲಿಗರು ರಾತ್ರಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಸಿದ್ದರಾಜು, ಸದಸ್ಯೆ ಕೇತಮ್ಮ ಸೇರಿದಂತೆ ಹಲವು ಗಣ್ಯರು ಈ ಉತ್ಸವದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.