ADVERTISEMENT

ಚುನಾವಣಾ ವೆಚ್ಚ ಸಲ್ಲಿಕೆ: ಏ. 29 ಕಡೆ ದಿನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 8:47 IST
Last Updated 26 ಏಪ್ರಿಲ್ 2013, 8:47 IST

ಚಾಮರಾಜನಗರ: ಎಲ್ಲ ಅಭ್ಯರ್ಥಿಗಳು ಚುನಾವಣೆಗೆ ಮಾಡಿರುವ ಸಂಪೂರ್ಣ ವೆಚ್ಚದ ವರದಿಯನ್ನು ಏ. 29ರೊಳಗೆ ಸಲ್ಲಿಸಬೇಕು. ಇಲ್ಲವಾದರೆ ಅಭ್ಯರ್ಥಿಗಳಿಗೆ ನೋಟಿಸ್ ನೀಡಿ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ವೆಚ್ಚ ವೀಕ್ಷಕರಾದ ಧರ್ಮೇಂದ್ರಕುಮಾರ್ ಹಾಗೂ ಪಂಕಜ್‌ಸಿಂಗ್ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಗುರುವಾರ ಕಣದಲ್ಲಿರುವ ಅಭ್ಯರ್ಥಿಗಳಿಗೆ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಅಭ್ಯರ್ಥಿಗಳು ಮಾಡುವ ದಿನನಿತ್ಯದ ವೆಚ್ಚ ನಮೂದು ಮಾಡಲು ಈಗಾಗಲೇ ಎಬಿಸಿ ಎಂಬ ವಹಿ ನೀಡಲಾಗಿದೆ. ಆದರೆ, ಬಹುತೇಕ ಅಭ್ಯರ್ಥಿಗಳು ಈ ವಹಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಚುನಾವಣೆಗೆ ಮಾಡುವ ಪ್ರತಿಯೊಂದು ವೆಚ್ಚವನ್ನು ಕಡ್ಡಾಯವಾಗಿ ದಾಖಲು ಮಾಡಿ ಸಲ್ಲಿಸಬೇಕು. ಈ ತಿಂಗಳ 29ರೊಳಗೆ ಕಡ್ಡಾಯವಾಗಿ ಎಲ್ಲ ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರ ಸಲ್ಲಿಸಬೇಕು ಎಂದು ಹೇಳಿದರು.

ಅಭ್ಯರ್ಥಿಗಳು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕೆಂದು ಈ ಹಿಂದೆಯೇ ಸೂಚಿಸಲಾಗಿದೆ. ಚುನಾವಣೆಯಲ್ಲಿ ಮಾಡುವ ಎಲ್ಲ ವೆಚ್ಚವನ್ನು ಬ್ಯಾಂಕ್‌ನಿಂದ ಡ್ರಾ ಮಾಡಿದ ಹಣದಿಂದಲೇ ನಿರ್ವಹಿಸಬೇಕು. ಆದರೆ, ಈ ರೀತಿ ಮಾಡದೆ ನೇರವಾಗಿ ಖರ್ಚು-ವೆಚ್ಚ ಮಾಡುವಂತಿಲ್ಲ. ದಿನನಿತ್ಯದ ವೆಚ್ಚದ ಬಗ್ಗೆ ಪ್ರತಿಯೊಂದು ವಿಷಯವನ್ನು ಪಾರದರ್ಶಕವಾಗಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಚಾರ ಸಂಬಂಧ ವೆಚ್ಚ ಮಾಡುವ ಪರಿಕರಗಳು, ವಾಹನ ಇತರೇ ಸಾಮಗ್ರಿ ಕುರಿತು ದರ ನಿಗದಿ ಮಾಡಿದ್ದಾರೆ. ಆದರೆ, ಕೆಲವು ಅಭ್ಯರ್ಥಿಗಳು ಈ ನಿಗದಿತ ದರಕ್ಕಿಂತ ಕಡಿಮೆ ದರ ನಮೂದು ಮಾಡಿ ವೆಚ್ಚ ವರದಿ ದಾಖಲು ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.

ಗುಂಡ್ಲುಪೇಟೆ ಕ್ಷೇತ್ರದ ಸಾಮಾನ್ಯ ವೀಕ್ಷಕ ಪಂಡಿತ್ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ನೀತಿಸಂಹಿತೆ ಉಲ್ಲಂಘನೆಯಾದರೆ ಕ್ರಮಕೈಗೊಳ್ಳಲಾಗುವುದು. ಮತಗಟ್ಟೆ ಹಾಗೂ ಮತ ಎಣಿಕೆಗೆ ಅಭ್ಯರ್ಥಿಗಳು ತಮ್ಮ ಏಜೆಂಟರನ್ನು ಕೂಡಲೇ ನೇಮಕ ಮಾಡಬೇಕು. ಗುರುತಿನ ಚೀಟಿ, ಚುನಾವಣಾ ಪಾಸ್‌ಗಳನ್ನು ಪಡೆದುಕೊಳ್ಳಬೇಕು. ಮತದಾನದ ದಿನದಂದು ಬೆಳಿಗ್ಗೆ 6 ಗಂಟೆಗೆ ಮಾಕ್‌ಪೋಲ್ ಮಾಡಲಾಗುತ್ತದೆ. ಈ ವೇಳೆ ಏಜೆಂಟರು ಕಡ್ಡಾಯವಾಗಿ ಹಾಜರಿರಬೇಕು ಎಂದರು.

ಪೊಲೀಸ್ ವೀಕ್ಷಕ ಲಖನ್ ಲಾಲ್ ಮಾತನಾಡಿ, ಮತದಾನದ ದಿನದಂದು ರಾಜಕೀಯ ಪಕ್ಷಗಳು ಮತದಾರರನ್ನು ವಾಹನದಲ್ಲಿ ಕರೆತರುವಂತಿಲ್ಲ. ಮತಗಟ್ಟೆಯ 200 ಮೀ. ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಮಾತನಾಡಿ, ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿ ಬಹಿರಂಗ ಪ್ರಚಾರ ಸಭೆ ಮಾಡುವ ಮೊದಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಬಳಕೆ ಮಾಡುವ ವಾಹನಗಳ ಸಂಖ್ಯೆ, ಶಾಮಿಯಾನ, ಕುರ್ಚಿ ಸೇರಿದಂತೆ ಇತರೇ ಸಾಮಗ್ರಿ ಬಗ್ಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಸಮಾರಂಭದ ವಿಡಿಯೊ ಚಿತ್ರೀಕರಣ ಮಾಡಿ ಆ ಆಧಾರದ ಮೇಲೆ ಅಭ್ಯರ್ಥಿಗಳ ಲೆಕ್ಕಕ್ಕೆ ಖರ್ಚು ಸೇರಿಸಲಾಗುವುದು ಎಂದರು.

ಆಯಾ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಚಾರ ಸಭೆ, ಕರಪತ್ರ, ಪೋಸ್ಟರ್ ಇತರೇ ಚುನಾವಣಾ ಸಂಬಂಧಿ ಅನುಮತಿಗಾಗಿ ಆಯಾ ತಾಲ್ಲೂಕು ಕಚೇರಿಯಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದ ಗಂಟೆಯೊಳಗೆ ಅನುಮತಿ ಕೊಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಚಾಮರಾಜನಗರ ಕ್ಷೇತ್ರದ ವೀಕ್ಷಕ ಎಚ್.ಎನ್. ಪಾಟೀಲ್, ಹನೂರು ಕ್ಷೇತ್ರದ ವೀಕ್ಷಕ ವಿ. ರಾಂ ವಿಶಾಲ್ ಮಿಶ್ರಾ, ಕೊಳ್ಳೇಗಾಲ ಕ್ಷೇತ್ರದ ವೀಕ್ಷಕ ಪಿ.ಎನ್.ಬಿ. ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಆರ್.ಸೋಮಶೇಖರಪ್ಪ, ಅಬಕಾರಿ ಉಪ ಆಯುಕ್ತ ಬಿ ಮಾದೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್. ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.