ADVERTISEMENT

ಚುನಾವಣೆ ನಂತರದ ನಿರಾಳತೆ

ರಜೆ ಮೇಲೆ ಹೋದ ಸಿಬ್ಬಂದಿ, ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆ

ಕೆ.ಎಸ್.ಗಿರೀಶ್
Published 17 ಮೇ 2018, 8:33 IST
Last Updated 17 ಮೇ 2018, 8:33 IST

ಚಾಮರಾಜನಗರ: ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ನಂತರ ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಾಳರಾಗಿದ್ದಾರೆ. ಮತ ಎಣಿಕೆಯ ಮರುದಿನ ವಿವಿಧ ಇಲಾಖೆಗಳಲ್ಲಿ ಹಾಜರಾತಿ ಕಡಿಮೆ ಇತ್ತು.

ಜಿಲ್ಲೆಯಲ್ಲಿ ಒಟ್ಟು 5,861 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,484, ಕೊಳ್ಳೇಗಾಲ ಕ್ಷೇತ್ರದಲ್ಲಿ 1,459, ಚಾಮರಾಜನಗರ ಕ್ಷೇತ್ರದಲ್ಲಿ 1,418 ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,500 ಮಂದಿ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದರು. ಇವರೆಲ್ಲ ಚುನಾವಣೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ಕಾರ್ಯ ನಿರ್ವಹಿಸಿದ್ದರು. ಬಹಳಷ್ಟು ಮಂದಿಗೆ ವಾರದ ರಜೆಯೂ ಸಿಕ್ಕಿರಲಿಲ್ಲ. ಇದೀಗ ಇವರೆಲ್ಲ ರಜೆಯ ಮೇಲೆ ತೆರಳಿದ್ದಾರೆ.

ಚುನಾವಣೆ ಘೋಷಣೆಯಾದಾಗಿ ನಿಂದ ವಿವಿಧ ಇಲಾಖೆಗಳಲ್ಲಿ ಕೆಲಸ ಅಕ್ಷರಶಃ ಸ್ಥಗಿತಗೊಂಡಿದೆ. ಯಾವುದೇ ಕಡತಗಳು ವಿಲೇವಾರಿಯಾಗುತ್ತಿಲ್ಲ ಅಥವಾ ವಿಲೇವಾರಿಯಾಗಲು ವಿಳಂಬವಾಗುತ್ತಿವೆ. ಕೇಳಿದರೆ, ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿದ್ದಾರೆ ಎಂಬ ಉತ್ತರ ಬರುತ್ತಿತ್ತು. ಚುನಾವಣೆ ಯಶಸ್ವಿಯಾಗಿ ಮುಗಿದಿರುವುದರಿಂದ ಇದೀಗ ಇವರೆಲ್ಲ ನಿರಾಳರಾಗಿದ್ದಾರೆ.

ADVERTISEMENT

ಈ ಬಾರಿ ಆಶಾ ಕಾರ್ಯಕರ್ತೆ ಯರನ್ನೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದು ವಿಶೇಷ ಎನಿಸಿತ್ತು. ಹಗಲು ರಾತ್ರಿ ಎನ್ನದೇ ಕಾರ್ಯ ನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸದ ಒತ್ತಡದಿಂದ ಹೈರಾಣಾಗಿದ್ದರು. ‌ಕೆಲವರಂತೂ ಮತದಾನ ಮುಗಿದ ಮಾರನೇ ದಿನದಿಂದಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಮತ್ತೆ ಕೆಲವರಿಗೆ ಮತ ಎಣಿಕೆ ಮುಗಿದ ಬಳಿಕ ರಜೆ ಸಿಕ್ಕಿದೆ.‌

ಇದರಿಂದಾಗಿ ಬುಧವಾರ ಇಲ್ಲಿನ ಜಿಲ್ಲಾಡಳಿತ ಭವನದ ಬಹುತೇಕ ಇಲಾಖೆಗಳಲ್ಲಿ ಖಾಲಿ ಕುರ್ಚಿಗಳೇ ಕಂಡು ಬಂದವು. ಕೆಲವು ಇಲಾಖೆಗಳಲ್ಲಿ ಪರಿಚಾರಕರನ್ನು ಬಿಟ್ಟರೆ ಉಳಿದ ಸಿಬ್ಬಂದಿ ಹಾಗೂ ಅಧಿಕಾರಿಗಳು ಇರಲಿಲ್ಲ.

‘ಚುನಾವಣಾ ಕಾರ್ಯ ಎಂಬುದು ಅತ್ಯಂತ ಕ್ಲಿಷ್ಟ ಹಾಗೂ ನಾಜೂಕಿನದು. ಎಷ್ಟೋ ಬಾರಿ ಆರೋಗ್ಯ ಕೆಟ್ಟರೂ ಅನಿವಾರ್ಯವಾಗಿ ಕೆಲಸಕ್ಕೆ ಬರಬೇಕಿರುತ್ತದೆ. ಇಂತಹ ಹೊತ್ತಿನಲ್ಲಿ ಕೆಲಸದ ಅವಧಿಯೂ ಹೆಚ್ಚಿರುತ್ತದೆ. ಹಾಗಾಗಿ, ಸಹಜವಾಗಿಯೇ ಒಂದೆರಡು ದಿನಗಳ ವಿಶ್ರಾಂತಿಯ ಅಗತ್ಯವಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯ ರಾಜಕೀಯದತ್ತ ಜನರ ಚಿತ್ತ

ಚುನಾವಣೆ ನಡೆಯುವವರೆಗೂ ತಮ್ಮ ತಮ್ಮ ಕ್ಷೇತ್ರಗಳ ರಾಜಕೀಯದತ್ತಲೇ ಚರ್ಚೆ ನಡೆಸುತ್ತಿದ್ದ ಜನಸಾಮಾನ್ಯರು ಇದೀಗ ರಾಜ್ಯ ರಾಜಕೀಯದತ್ತ ಚಿತ್ತ ನೆಟ್ಟಿದ್ದಾರೆ. ಹೋಟೆಲ್‌ಗಳಲ್ಲಿ, ಕ್ಯಾಂಟೀನ್‌ಗಳಲ್ಲಿ, ಅರಳಿಕಟ್ಟೆಗಳಲ್ಲಿ ಇದೀಗ ಇದರದೇ ಚರ್ಚೆ ಆರಂಭವಾಗಿದೆ. ಎಲ್ಲರ ಕೈಲೂ ಸ್ಮಾರ್ಟ್‌ಫೋನ್‌ ಇರುವುದರಿಂದ ಯೂಟ್ಯೂಬ್‌ನಲ್ಲಿ ಯಾವುದಾದರೂ ಸುದ್ದಿವಾಹಿನಿಯ ಲೈವ್‌ ಹಾಕಿಕೊಂಡು ವ್ಯಾಪಾರಸ್ಥರು ನೋಡುತ್ತಾ ಕ್ಷಣಕ್ಷಣದ ರಾಜಕೀಯ ಮಾಹಿತಿ ಪಡೆಯುತ್ತಿದ್ದ ದೃಶ್ಯ ಕಂಡು ಬಂತು.

ಕೆಲಸದತ್ತ ಮುಖ ಮಾಡಿದ ಕಾರ್ಮಿಕರು:

ಚುನಾವಣೆ ಘೋಷಣೆಯಾದಾಗಿನಿಂದ ಫಲಿತಾಂಶ ಹೊರಬೀಳುವವರೆಗೂ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಕಾರ್ಯಕರ್ತರು ನಿರಂತರ ಕೆಲಸ ಮಾಡಿದ್ದರು. ಇವರೆಲ್ಲ ಇದೀಗ ತಮ್ಮ ತಮ್ಮ ಕೆಲಸಗಳಿಗೆ ವಾಪಸ್ಸಾಗಿದ್ದಾರೆ.‌

ಮತದಾನ ಮುಗಿದ ಬಳಿಕವೂ ಹಲವು ಕಾರ್ಯಕರ್ತರು ತಮ್ಮ ತಮ್ಮ ಮುಖಂಡರ ಸುತ್ತವೇ ಇದ್ದರು. ಫಲಿತಾಂಶ ಪ್ರಕಟವಾದ ನಂತರ ಇವರೆಲ್ಲ ತಮ್ಮ ತಮ್ಮ ಮೂಲವೃತ್ತಿಗಳಿಗೆ ಹಿಂದಿರುಗಿದ್ದಾರೆ. ಗೆದ್ದ ಅಭ್ಯರ್ಥಿಗಳು ರಾಜಧಾನಿ ಬೆಂಗಳೂರಿಗೆ ತೆರಳಿರುವುದರಿಂದ ಆ ಪಕ್ಷಗಳ ಕಾರ್ಯಕರ್ತರಿಗೆ ಇಲ್ಲಿ ಕೆಲಸ ಇಲ್ಲ. ಸೋತ ಪ‍ಕ್ಷಗಳ ಅಭ್ಯರ್ಥಿಗಳು ಮನೆಯಿಂದ ಇನ್ನೂ ಹೊರಬಾರದೇ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದರಿಂದ ಇಲ್ಲಿನ ಕಾರ್ಯಕರ್ತರಿಗೂ ಯಾವುದೇ ಕೆಲಸ ಇಲ್ಲ. ಹೀಗಾಗಿ, ಇವರು ಉದ್ಯೋಗದತ್ತ ಹೊರಟಿದ್ದಾರೆ.

ಚುನಾವಣೆ ಘೋಷಣೆಯಾದಾಗಿನಿಂದ ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕರ ಕೊರತೆ ಎದುರಾಗಿತ್ತು.ಮೈಸೂರಿನಲ್ಲಿ ಇವರ ಅಭಾವ ಹೆಚ್ಚಾಗಿ ಕಂಡು ಬಂದಿತ್ತು. ನಿತ್ಯ ಮೈಸೂರಿಗೆ ತೆರಳುತ್ತಿದ್ದ ಬಹುತೇಕ ಕಟ್ಟಡ ನಿರ್ಮಾಣ ಕಾರ್ಮಿಕರು ತಮ್ಮ ಕೆಲಸಗಳಿಗೆ ಹೋಗದೇ ರಾಜಕೀಯ ಪಕ್ಷಗಳ ಚುನಾವಣಾ ಕೆಲಸದಲ್ಲಿ ತೊಡಗಿಕೊಂಡಿದ್ದರು. ಚುನಾವಣೆ ಮುಗಿದ ಬಳಿಕ ಇದೀಗ ಸಹಜ ಸ್ಥಿತಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.