ಮೈಸೂರು: `ಮಗ ಹೊಂಟೋಗಿ ಐದ್ ದಿನ ಆಯ್ತು.. ಮನೆ ಜಗಲಿ ಮ್ಯಾಲಿನ `ದೀಪ~ ಆರಿಹೋಗೈತೆ.. ಎದೆಮಟ್ಟ ಬೆಳೆದಿದ್ದ ಕಬ್ಬು ಸಾವಿನ ರೂಪದಲ್ಲಿ ಬಂದು ಮನೆಗೆ ನಂದಾದೀಪವಾಗಿದ್ದ ಮಗನ ಜೀವಾ ಬಲಿ ತಕ್ಕಂಡೈತೆ.. ಇನ್ನೆಲ್ಲಿಯ ಶಾಂತಿ, ನೆಮ್ಮದಿ.. ಮಗನೇ ಹೊಂಟೋದ್ ಮ್ಯಾಕೆ ಇನ್ನೇನೈತೆ..
ಇಷ್ಟು ಹೇಳುವ ಹೊತ್ತಿಗೆ ಗದ್ಗತಿಳಾದ ತಾಯಿ ಒಂದೇ ಸವನೆ ಬಿಕ್ಕಿಬಿಕ್ಕಿ ಅಳತೊಡಗಿದರು. ಮಗನ ಹೆಸರು ಕೇಳುತ್ತಿದ್ದಂತೆಯೇ ಮನೆಯಲ್ಲೇ ಇರಬೇಕು ಎಂದು ಕ್ಷಣಹೊತ್ತು ಹುಡುಕತೊಡಗಿದರು! ಮಗ ಇಲ್ಲವೆಂಬುದು ನೆನಪಾಗುತ್ತಿದ್ದಂತೆ ಮೌನಕ್ಕೆ ಶರಣಾದರು!
-ಎಚ್.ಡಿ.ಕೋಟೆ ತಾಲ್ಲೂಕಿನ ಕಪಿಲಾ ನದಿಯ ಹಿನ್ನೀರಿನಲ್ಲಿರುವ ಪುಟ್ಟ ಗ್ರಾಮ ಸಾಗರೆಯಲ್ಲಿ ಶನಿವಾರ ನೇಣಿಗೆ ಶರಣಾದ ಶೇಖರ್‌ನ ಮನೆಯಲ್ಲಿ ಬುಧವಾರ ಕಂಡು ಮನಕಲಕುವ ದೃಶ್ಯಗಳಿವು. ಸಾಗರೆಯ ರೈತ ಪುಟ್ಟೇಗೌಡರ ಮೂರನೇ ಮಗನೇ ಶೇಖರ್. ಒಂಬತ್ತು ಎಕರೆ ಜಮೀನಿನಲ್ಲಿ ಐದು ಎಕರೆ ಕಬ್ಬು, ಎರಡು ಎಕರೆ ಅರಿಶಿನ ಹಾಗೂ ಎರಡು ಎಕರೆ ಶುಂಠಿ ಬೆಳೆದಿದ್ದರು.
ಬಣ್ಣಾರಿ ಅಮ್ಮನ್ ಕಾರ್ಖಾನೆಗೆ ಕಬ್ಬು ಸಾಗಿಸಲೆಂದು ತಾವೇ ಮುಂದೆ ನಿಂತು ಕಬ್ಬು ಕಟಾವು ಮಾಡಿಸಿದ್ದರು. ಆದರೆ, 12 ದಿನವಾದರೂ ಗದ್ದೆಯಲ್ಲಿ ಕಟಾವು ಮಾಡಿಟ್ಟ ಕಬ್ಬನ್ನು ಕಾರ್ಖಾನೆಯವರು ಸಾಗಿಸಲಿಲ್ಲ. ಇದರಿಂದ ಮನನೊಂದ ಶೇಖರ್ ಕಬ್ಬಿನ ಗದ್ದೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.
ಸಾಯುವ ಮುನ್ನ `ನನ್ನ ಬಗ್ಗೆ ಚಿಂತೆ ಬೇಡ. ಸಾಲದ ಬಾಧೆ ತಾಳದೆ ಆತ್ಯಹತ್ಯೆಗೆ ಶರಣಾಗಿದ್ದೇನೆ. ಇದೇ ರೀತಿ ಲಕ್ಷಾಂತರ ರೈತರು ಕೈಯಲ್ಲಿ ಜೀವ ಹಿಡಿದುಕೊಂಡು ಬದುಕುತ್ತಿದ್ದಾರೆ. ಸರ್ಕಾರ, ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಆಡಳಿತ ಮಂಡಳಿ ಅಧಿಕಾರಿಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಮುಂದೆ ಯಾವ ರೈತರಿಗೂ ನನ್ನ ಹಾಗೆ ಅನ್ಯಾಯವಾಗದಂತೆ ಶಾಶ್ವತ ಪರಿಹಾರವನ್ನು ಸರ್ಕಾರ ರೂಪಿಸಬೇಕು. ರೈತರ ಬದುಕು ಹಸನಾಗಿಸುವತ್ತ ಚಿತ್ತ ಹರಿಸಬೇಕು~ ಎಂದು ಮರಣಪತ್ರದಲ್ಲಿ ಬರೆದಿಟ್ಟಿರುವುದು ಶೇಖರ್ ಕುಟುಂಬದ ದುಃಖವನ್ನು ಇಮ್ಮಡಿಗೊಳಿಸಿದೆ.
ಆಗಿದ್ದೇನು?: ಎರಡು ಎಕರೆ ಅರಿಶಿನ ಬೆಳೆದಿದ್ದರೂ ಬೆಲೆ ಕ್ವಿಂಟಲ್‌ಗೆ 3,500 ರೂಪಾಯಿಗೆ ಇಳಿದಿದ್ದರಿಂದ ಅರಿಶಿನವನ್ನು ಕೀಳದೆ ಭೂಮಿಯಲ್ಲೇ ಬಿಡಲಾಗಿತ್ತು. ಐದು ಎಕರೆ ಕಬ್ಬು ಕಟಾವು ಮಾಡಲು ಕೂಲಿಯವರಿಗೆ 10 ಸಾವಿರ ರೂಪಾಯಿ ಕೂಲಿಯನ್ನು ಮುಂಗಡವಾಗಿ ಕೊಟ್ಟಿದ್ದರು. ಆದರೆ, ಕೂಲಿಕಾರ್ಮಿಕರು ಕಬ್ಬು ಕಟಾವು ಮಾಡಿದ ಬಳಿಕ ಲಾರಿಯಲ್ಲಿ ತುಂಬದೇ ಕೈಕೊಟ್ಟರು.
ಇದರಿಂದ ವಿಚಲಿತನಾದ ಶೇಖರ್ ಕಾರ್ಖಾನೆ ಅಧಿಕಾರಿಗಳಿಗೆ ಗೋಗರೆದು ಕಬ್ಬು ತೆಗೆದುಕೊಂಡು ಹೋಗುವಂತೆ ಪರಿಪರಿಯಾಗಿ ಮನವಿ ಮಾಡಿದರು. ಆದರೆ, ಕಾರ್ಖಾನೆಯವರು ನಿರ್ಲಕ್ಷ್ಯ ಮಾಡಿದರು. ಇದರಿಂದಾಗಿ ಕಬ್ಬು ಒಣಗಲು ಆರಂಭಿಸಿತು. ಬ್ಯಾಂಕಿನ ಸಾಲ, ಭವಿಷ್ಯದ ದಿನಗಳನ್ನು ನೆನೆಪಿಸಿಕೊಂಡ ಶೇಖರ್ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾದರು.ಮಗನ ಸಾವಿನಿಂದ ಸಾಗರೆಯ ಮನೆಯಲ್ಲಿ ನೀರವ ಮೌನ ಮನೆಮಾಡಿದೆ.
ಮೂರು ದಿನಗಳಿಂದ ಒಲೆ ಉರಿದಿಲ್ಲ. ಹಿತ್ತಲಿನಲ್ಲಿರುವ ದನಕರುಗಳು ಅಂಬಾ ಎನ್ನದೇ ಮೂಕವಾಗಿವೆ. ಕಪಿಲೆ ಪಕ್ಕದಲ್ಲೇ ಹರಿದರೂ ಶೇಖರ್ ಬಾಳಲ್ಲಿ ಬೆಳಕು ಮೂಡಿಲ್ಲ. ಆತನ ಸಾವಿಗೆ ಸರ್ಕಾರ, ಕೃಷಿ ಇಲಾಖೆ, ಕಾರ್ಖಾನೆಯ ನಿರ್ಲಕ್ಷ್ಯ ಹಾಗೂ ಬ್ಯಾಂಕಿನ ಸಿಬ್ಬಂದಿ ಕಿರುಕುಳವೇ ಕಾರಣ ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿವೆ. ಕಪಿಲೆ ತನ್ನ ಪಾಡಿಗೆ ತಾನು ಮೌನವಾಗಿ ಹರಿಯುತ್ತಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.