ಚಾಮರಾಜನಗರ: ಕಳೆದ ಒಂದು ದಶಕದ ಅವಧಿಯಲ್ಲಿ ಜಿಲ್ಲೆಯ ಜನಸಂಖ್ಯಾ ಬೆಳವಣಿಗೆ ದರ ಇಳಿಮುಖವಾಗಿರುವುದು 2011ರ ಜನಗಣತಿ ವರದಿಯಿಂದ ಬಹಿರಂಗಗೊಂಡಿದೆ.
ಲಿಂಗಾನುಪಾತ ಹಾಗೂ ಸಾಕ್ಷರತೆಯಲ್ಲಿ ದಾಖಲೆ ಪ್ರಮಾಣದ ಏರಿಕೆಯಾಗಿರುವುದು ವಿಶೇಷ. 2001ರಲ್ಲಿ ಜಿಲ್ಲೆಯ ಜನಸಂಖ್ಯಾ ಬೆಳವಣಿಗೆ ದರ ಶೇ. 9.29ರಷ್ಟಿತ್ತು. 2011ರ ಗಣತಿ ಅನ್ವಯ ಈ ಪ್ರಮಾಣ ಶೇ. 5.75ಕ್ಕೆ ಇಳಿದಿದೆ. ಜಿಲ್ಲೆಯಲ್ಲಿರುವ ಈಗಿನ ಒಟ್ಟು ಜನಸಂಖ್ಯೆ 10,20,962. ಇದರಲ್ಲಿ 5,13,359 ಪುರುಷರು ಹಾಗೂ 5,07,603 ಮಹಿಳೆಯರು ಇದ್ದಾರೆ. ಒಟ್ಟಾರೆ ರಾಜ್ಯದ ಜನಸಂಖ್ಯೆಗೆ ಜಿಲ್ಲೆಯ ಪಾಲು ಶೇ. 1.67ರಷ್ಟಿದೆ.
ರಾಜ್ಯ ಜನಸಂಖ್ಯಾ ನಿರ್ದೇಶನಾಲಯ ಪ್ರಕಟಿಸಿರುವ ಅಂಕಿ-ಅಂಶ ಪರಿಶೀಲಿಸಿದರೆ 1971-81ರ ವೇಳೆ ಜಿಲ್ಲೆಯಲ್ಲಿ ಜನಸಂಖ್ಯಾ ಬೆಳವಣಿಗೆ ದರ ದಾಖಲೆ ಬರೆದಿತ್ತು. ಈ ಅವಧಿಯಲ್ಲಿ ಶೇ. 24.61ರಷ್ಟು ಬೆಳವಣಿಗೆ ದರ ದಾಖಲಾಗಿದೆ. ಆ ನಂತರದ ದಶಕಗಳಲ್ಲಿ ಬೆಳವಣಿಗೆ ದರ ಕಡಿಮೆಯಾಗುತ್ತಾ ಬರುತ್ತಿರುವುದನ್ನು ಅಂಕಿ-ಅಂಶಗಳು ಪುಷ್ಟೀಕರಿಸುತ್ತವೆ.
1901-11ರಲ್ಲಿ ಜಿಲ್ಲೆಯ ಜನಸಂಖ್ಯಾ ಬೆಳವಣಿಗೆ ದರ ಶೇ. 2.91ರಷ್ಟಿತ್ತು ಎಂಬುದು ವಿಶೇಷ. 1911-21ರಲ್ಲಿ ಶೇ. 4.62ರಷ್ಟಿತ್ತು. 1921-31ರಲ್ಲಿ ಶೇ. 7.30, 1931-41ರಲ್ಲಿ ಶೇ. 10.74, 1941-51ರಲ್ಲಿ ಶೇ. 15.14ರಷ್ಟು ಏರಿಕೆಯಾಗಿತ್ತು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ದಶಕಗಳಲ್ಲೂ ಬೆಳವಣಿಗೆ ದರ ಏರಿಕೆ ಕಂಡಿತು. 1951-61ರ ಅವಧಿಯಲ್ಲಿ ಶೇ. 18.76ರಷ್ಟು ಏರಿಕೆಯಾಯಿತು. 1961-71ರಲ್ಲಿ ಈ ಪ್ರಮಾಣ ಶೇ. 15.50ಕ್ಕೆ ಇಳಿಮುಖವಾಯಿತು. 1981-91ರ ಅವಧಿಯಲ್ಲಿ ಬೆಳವಣಿಗೆ ದರ ಶೇ. 14.99ರಷ್ಟಿತ್ತು. ಆದರೆ, 1991-2001ರ ಜನಗಣತಿ ವೇಳೆಗೆ ಈ ಪ್ರಮಾಣ ಶೇ. 9.29ಕ್ಕೆ ಬಂದು ನಿಂತಿತು. ಈಗ ಈ ಪ್ರಮಾಣ ಶೇ. 5.75ಕ್ಕೆ ಇಳಿದಿದೆ.
ಲಿಂಗಾನುಪಾತದಲ್ಲಿ ಏರಿಕೆ
ದೇಶ, ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಯಲ್ಲಿ ಲಿಂಗಾನುಪಾತ ಪ್ರಮುಖ ಪಾತ್ರವಹಿಸುತ್ತದೆ. ಪುರುಷರ ಸಂಖ್ಯೆಗೆ ಅನುಗುಣವಾಗಿ ಮಹಿಳೆಯರ ಸಂಖ್ಯೆ ಇದ್ದರೆ ಸಾಮಾಜಿಕ ವ್ಯವಸ್ಥೆ ಸಮತೋಲನದಿಂದ ಕೂಡಿರುತ್ತದೆ.
ಸಮಾಜದಲ್ಲಿ ಇತ್ತೀಚೆಗೆ ಹೆಣ್ಣುಭ್ರೂಣ ಹತ್ಯೆ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ, ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಆದರೆ, 2011ರ ಜನಗಣತಿ ಅನ್ವಯ ಜಿಲ್ಲೆಯಲ್ಲಿ ಲಿಂಗಾನುಪಾತದ ಪ್ರಮಾಣ ಹೆಚ್ಚಳವಾಗಿರುವುದು ಸಮಾಧಾನಕರ ಸಂಗತಿ.
2001ರ ಜನಗಣತಿ ಅನ್ವಯ ಜಿಲ್ಲೆಯಲ್ಲಿ 1 ಸಾವಿರ ಪುರುಷರಿಗೆ 971 ಮಹಿಳೆಯರು ಇದ್ದರು. 2011ರ ಗಣತಿ ಅನ್ವಯ ಈ ಸಂಖ್ಯೆ 989ಕ್ಕೆ ಮುಟ್ಟಿದೆ. ಜಿಲ್ಲೆಯ ಇತಿಹಾಸ ಅವಲೋಕಿಸಿದರೆ ಒಂದು ಶತಮಾನದ ಹಿಂದೆ ಜಿಲ್ಲೆಯಲ್ಲಿ ಸ್ತ್ರೀಯರ ಸಂಖ್ಯೆ ಹೆಚ್ಚಿತ್ತು ಎಂದು ಜನಗಣತಿ ನಿರ್ದೇಶನಾಲಯದ ವರದಿಗಳು ಹೇಳುತ್ತವೆ. ಜಿಲ್ಲೆಯಲ್ಲಿ 1901ರ ವೇಳೆ ಒಂದು ಸಾವಿರ ಪುರುಷರಿಗೆ 1,024 ಮಹಿಳೆಯರಿದ್ದರು ಎನ್ನುತ್ತವೆ ಅಂಕಿ-ಅಂಶ.
1911ರಲ್ಲಿ 1,015 ಹಾಗೂ 1921ರಲ್ಲಿ 1,007 ಮಹಿಳೆಯರು ಇದ್ದರು. ಆ ನಂತರದ ದಶಕಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. 1931ರಲ್ಲಿ 998, 1941ರಲ್ಲಿ 975, 1951ರಲ್ಲಿ 978 ಮಹಿಳೆಯರು ಇದ್ದರು. 1961ರಲ್ಲಿ 968, 1971ರಲ್ಲಿ 955, 1981ರಲ್ಲಿ 956, 1991ರಲ್ಲಿ 953, 2001ರಲ್ಲಿ 971 ಮಹಿಳೆಯರು ಇದ್ದರು. 2011ರ ಗಣತಿ ಅನ್ವಯ ಜಿಲ್ಲೆಯಲ್ಲಿ 1 ಸಾವಿರ ಪುರುಷರಿಗೆ 989 ಹೆಣ್ಣುಮಕ್ಕಳು ಇದ್ದಾರೆ ಎಂದು ಅಂಕಿ-ಅಂಶ ಹೇಳುತ್ತವೆ.
ಜನಸಾಂದ್ರತೆಯಲ್ಲಿ ಏರಿಕೆ
ಒಂದು ಚ.ಕಿ.ಮೀ.ನಲ್ಲಿ ವಾಸಿಸುವ ಜನಸಾಂದ್ರತೆ ಪ್ರಮಾಣವೂ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2001ರ ಗಣತಿ ಅನ್ವಯ ಒಂದು ಚ.ಕಿ.ಮೀ. ಪ್ರದೇಶದಲ್ಲಿ 189 ಜನರು ವಾಸಿಸುತ್ತಿದ್ದರು. ಪ್ರಸಕ್ತ ಗಣತಿ ಅನ್ವಯ ಈ ಸಂಖ್ಯೆ 200ಕ್ಕೆ ಮುಟ್ಟಿದೆ.
ಸಾಕ್ಷರರ ಸಂಖ್ಯೆಯಲ್ಲಿ ಹೆಚ್ಚಳ
2011ರ ಜನಗಣತಿ ಅನ್ವಯ ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ. 61.12ರಷ್ಟಿದೆ.
ಹಿಂದಿನ ಗಣತಿಯಲ್ಲಿದ್ದ ಸಾಕ್ಷರತಾ ಪ್ರಮಾಣ ಶೇ. 50.87. ಒಂದು ದಶಕದ ಅವಧಿಯಲ್ಲಿ ಶೇ. 10.25ರಷ್ಟು ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಒಟ್ಟು 5,66,076 ಸಾಕ್ಷರರು ಇದ್ದಾರೆ. ಇವರಲ್ಲಿ ಪುರುಷರ ಸಂಖ್ಯೆ 3,15,321. ಮಹಿಳಾ ಸಾಕ್ಷರರ ಸಂಖ್ಯೆ 2,50,755.
2001ರಲ್ಲಿ ಒಟ್ಟು ಸಾಕ್ಷರರಲ್ಲಿ ಶೇ. 59.03ರಷ್ಟು ಪುರುಷರಿದ್ದರು. ಪ್ರಸ್ತುತ ಈ ಪ್ರಮಾಣ ಶೇ. 67.88ರಷ್ಟಾಗಿದೆ. ಜತೆಗೆ, ಮಹಿಳಾ ಸಾಕ್ಷರತೆ ಪ್ರಮಾಣವೂ ಹೆಚ್ಚಿರುವುದು ಸಮಾಧಾನ ತಂದಿದೆ. ಹಿಂದಿನ ಗಣತಿಯಲ್ಲಿ ಒಟ್ಟು ಸಾಕ್ಷರರಲ್ಲಿ ಶೇ. 42.48 ಮಹಿಳೆಯರು ಇದ್ದರು. ಈ ಗಣತಿಯಲ್ಲಿ ಶೇ. 54.32ರಷ್ಟು ಮಹಿಳಾ ಸಾಕ್ಷರರು ಇದ್ದಾರೆ. ಮಹಿಳಾ ಸಾಕ್ಷರತೆ ಪ್ರಮಾಣ ಒಂದು ದಶಕದ ಅವಧಿಯಲ್ಲಿ ಶೇ. 11.84ರಷ್ಟು ಹೆಚ್ಚಳವಾಗಿದೆ.
ಕುಟುಂಬ ನಿಯಂತ್ರಣ ಕಾರ್ಯಕ್ರಮ ಫಲಪ್ರದ
`ಕಳೆದ 5 ವರ್ಷದಿಂದ ಜಿಲ್ಲೆಯಲ್ಲಿ ಕುಟುಂಬ ನಿಯಂತ್ರಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಆರೋಗ್ಯ ಅರಿವು ಕಾರ್ಯಕ್ರಮಗಳ ಬಗ್ಗೆ ವಿಶೇಷ ಒತ್ತು ನೀಡಿ ನಿರೀಕ್ಷಿತ ಗುರಿ ಸಾಧಿಸಲಾಗಿದೆ. ಹೀಗಾಗಿ, ಜನಸಂಖ್ಯಾ ಬೆಳವಣಿಗೆ ದರ ಇಳಿಮುಖವಾಗಿದೆ' ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್. ರಮೇಶ್‌ಬಾಬು ತಿಳಿಸಿದರು.
`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳು ಯಶಸ್ಸು ಕಂಡಿವೆ. ಜನನ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಿರೀಕ್ಷಿತ ಗುರಿ ಸಾಧಿಸಿದ್ದೇವೆ ಎಂದರು.
`ಜಿಲ್ಲೆಯಲ್ಲಿ ಲಿಂಗಾನುಪಾತ ಏರಿಕೆಯಾಗಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲಾ ವ್ಯಾಪ್ತಿ 20 ಸ್ಕ್ಯಾನಿಂಗ್ ಸೆಂಟರ್‌ಗಳಿವೆ. ಕಾಲಕಾಲಕ್ಕೆ ಈ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತಿದೆ. ಹೆಣ್ಣುಭ್ರೂಣ ಹತ್ಯೆ ತಡೆಗೆ ನಿಗಾವಹಿಸಲಾಗಿದೆ. ಜತೆಗೆ, ಈ ಸಂಬಂಧ ಕಾರ್ಯಾಗಾರ ಹಮ್ಮಿಕೊಂಡು ಜನರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಂಗಾನುಪಾತದಲ್ಲಿ ಏರಿಕೆಯಾಗಿದೆ' ಎಂದು ಪ್ರತಿಕ್ರಿಯಿಸಿದರು.
ಜನಸಂಖ್ಯಾ ಬೆಳವಣಿಗೆ ದರ
1901-11 : ಶೇ 2.91
1911-21 : ಶೇ 4.62
1921-31 : ಶೇ 7.30
1931-41 : ಶೇ 10.74
1941-51 : ಶೇ 15.14
1951-61 : ಶೇ 18.76
1961-71 : ಶೇ 15.50
1981-91 : ಶೇ 14.99
1991-2001 : ಶೇ 9.29
2001-2011 : ಶೇ 5.75
ಲಿಂಗಾನುಪಾತದಲ್ಲಿ ಏರಿಕೆ
2001: 1000 ಪುರುಷರಿಗೆ 971 ಮಹಿಳೆಯರು
2011: 1000 ಪುರುಷರಿಗೆ 989 ಮಹಿಳೆಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.