ADVERTISEMENT

ಜಿಲ್ಲಾಸ್ಪತ್ರೆ; ವೈದ್ಯಕೀಯ ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 28 ಮೇ 2012, 8:00 IST
Last Updated 28 ಮೇ 2012, 8:00 IST

ಚಾಮರಾಜನಗರ: ಪ್ರತಿನಿತ್ಯವೂ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಗಂಟೆಗಟ್ಟಲೇ ರೋಗಿಗಳು ಹಾಗೂ ಅವರ ಸಂಬಂಧಿಕರು ತಪಾಸಣೆಗೆ ಕಾಯುತ್ತಾರೆ. ಆದರೆ, ಅಗತ್ಯ ವೈದ್ಯಕೀಯ ಸಿಬ್ಬಂದಿಯ ಕೊರತೆಯಿಂದ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ರೋಗಿಗಳು ಸಂಕಷ್ಟ ಅನು ಭವಿಸುವಂತಾಗಿದೆ.

ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಯು 2007ರ ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್‌ ನಿಯಮಾವಳಿಗೆ ಒಳಪಟ್ಟಿದೆ. ಈ ನಿಯಮಾವಳಿ ಅನ್ವಯ ಅಗತ್ಯ ವೈದ್ಯರು, ಅರೆವೈದ್ಯಕೀಯ, ಕಚೇರಿ ಸಿಬ್ಬಂದಿಯನ್ನು ನೇಮಿಸುವುದು ರಾಜ್ಯ ಸರ್ಕಾರದ ಹೊಣೆ.ಹಂತ ಹಂತವಾಗಿ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ. ಆದರೆ, ಆಸ್ಪತ್ರೆಗೆ ಮಂಜೂರಾಗಿರುವ ಕೆಲವು ಹುದ್ದೆಗಳನ್ನೂ ಕೂಡ ಭರ್ತಿ ಮಾಡಲು ಸರ್ಕಾರ ಹಿಂದೇಟು ಹಾಕಿದೆ. ಇದು ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

150 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಗೆ ಒಟ್ಟು 19 ವೈದ್ಯರ ಹುದ್ದೆ ಮಂಜೂರಾಗಿವೆ. ಆದರೆ, ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ಸಂಖ್ಯೆ 14. ಮಂಜೂರಾಗಿರುವ ಹುದ್ದೆಗಳ ದುಪ್ಪಟ್ಟು ಸಂಖ್ಯೆಯಲ್ಲಿ ತಜ್ಞ ವೈದ್ಯರನ್ನು ನೇಮಕ ಮಾಡಿದರಷ್ಟೇ ರೋಗಿಗಳಿಗೆ ಗುಣಮಟ್ಟದ ಸೇವೆ ಸಿಗಲಿದೆ. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಮಾತ್ರ ಕ್ರಮಕೈಗೊಂಡಿಲ್ಲ.

ವೈದ್ಯರೊಬ್ಬರು ರಜೆ, ಕೋರ್ಟ್ ಪ್ರಕರಣಗಳಿಗೆ ಹಾಜರಾಗಲು ತೆರಳಿದರೆ ರೋಗಿಗಳ ಸಂಕಷ್ಟ ಹೇಳತೀರದು. ವಿಭಾಗವೊಂದಕ್ಕೆ ಕನಿಷ್ಠ ಹೆಚ್ಚುವರಿಯಾಗಿ ಒಬ್ಬ ವೈದ್ಯರನ್ನು ನೇಮಿಸುವ ಪ್ರಯತ್ನವೂ ನಡೆದಿಲ್ಲ. ಹೀಗಾಗಿ, ಇರುವ ಸಿಬ್ಬಂದಿ ನಿಗದಿತ ಅವಧಿಯಲ್ಲಿ ಗುಣಮಟ್ಟದ ಸೇವೆ ನೀಡಲು ತೊಡಕಾಗಿದೆ.

ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 150ರಿಂದ 200 ಹೆರಿಗೆ ಪ್ರಕರಣ ದಾಖಲಾಗುತ್ತವೆ. ಆದರೆ, ಒಬ್ಬರು ಮಾತ್ರ ಪ್ರಸೂತಿ ತಜ್ಞರಿದ್ದಾರೆ. ದಾಖಲಾಗುವ ಹೆರಿಗೆ ಪ್ರಕರಣಗಳನ್ನು ಪರಿಗಣಿಸಿದರೆ ಆಸ್ಪತ್ರೆಗೆ ಕನಿಷ್ಠ 5 ಮಂದಿ ಪ್ರಸೂತಿ ತಜ್ಞರ ಆವಶ್ಯಕತೆಯಿದೆ. ಹೆಚ್ಚುವರಿಯಾಗಿ ಪ್ರಸೂತಿ ತಜ್ಞರನ್ನು ನೇಮಕ ಮಾಡಲು ಕೂಡ ಸರ್ಕಾರ ನಿರ್ಲಕ್ಷ್ಯವಹಿಸಿದೆ.

ಶುಶ್ರೂಷ ಅಧೀಕ್ಷಕರು, ಹಿರಿಯ ಶುಶ್ರೂಷಕರು, ಟೆಕ್ನಿಷಿಯನ್ ಸೇರಿದಂತೆ ಆಸ್ಪತ್ರೆಗೆ ಒಟ್ಟು 83 ಅರೆವೈದ್ಯಕೀಯ ಹುದ್ದೆ ಮಂಜೂರಾಗಿವೆ. ಇದರಲ್ಲಿ 29 ಹುದ್ದೆ ಖಾಲಿ ಉಳಿದಿವೆ. ಹೀಗಾಗಿ, ರೋಗಿಗಳ ಶುಶ್ರೂಷೆಗೆ ತೊಂದರೆಯಾಗುತ್ತಿದೆ. ಮಂಜೂರಾಗಿರುವ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ಅಷ್ಟೇ ಸಂಖ್ಯೆಯ ಹುದ್ದೆಗಳಿಗೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿದರಷ್ಟೇ ನಾಗರಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಲಭಿಸಲಿದೆ. ಪ್ರಸ್ತುತ ಇರುವ ಸಿಬ್ಬಂದಿಯನ್ನು ಬಳಸಿಕೊಂಡೇ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೇವೆ ನೀಡುತ್ತಿದ್ದರೂ ಗುಣಮಟ್ಟ ಕಾಯ್ದುಕೊಳ್ಳಲು ತೊಡಕಾಗಿದೆ.

ಉದ್ಘಾಟನೆ ನೆನೆಗುದಿಗೆ:

150 ಆಸ್ಪತ್ರೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಯನ್ನು 250 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ನೂತನ ಕಟ್ಟಡ ನಿರ್ಮಾಣವಾಗಿ ವರ್ಷ ಉರುಳಿದರೂ ಉದ್ಘಾಟನಾ ಭಾಗ್ಯ ಕಂಡಿಲ್ಲ.

ಸರ್ಕಾರದ ನಿಯಮಾವಳಿ ಅನ್ವಯ ಕಟ್ಟಡದ ಕಾಮಗಾರಿ ಶೇ. 75ರಷ್ಟು ಪೂರ್ಣಗೊಂಡ ವೇಳೆ ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡುವುದು ಸರ್ಕಾರದ ಹೊಣೆ. ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್‌ ನಿಯಮಾವಳಿ ಅನ್ವಯ ಮೇಲ್ದರ್ಜೆಗೇರಿರುವ ಈ ಆಸ್ಪತ್ರೆಗೆ 43 ವೈದ್ಯರು, 190 ಅರೆವೈದ್ಯಕೀಯ ಸಿಬ್ಬಂದಿ ಹಾಗೂ 22 ಮಂದಿ ಕಚೇರಿ ಸಿಬ್ಬಂದಿಯ ಅಗತ್ಯವಿದೆ. ಆದರೆ, ಇಂದಿಗೂ ನೇಮಕಾತಿಯೇ ನಡೆದಿಲ್ಲ.

`ಪ್ರಸ್ತುತ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆಯಿಂದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಇರುವ ಸಿಬ್ಬಂದಿಯಿಂದ ಗುಣಮಟ್ಟದ ಸೇವೆ ನಿರೀಕ್ಷಿಸಲು ಸಾಧ್ಯವಿಲ್ಲ.

ಅಗತ್ಯ ಸಿಬ್ಬಂದಿಯ ನೇಮಕ ಹಾಗೂ ಉಪಕರಣಗಳ ಪೂರೈಕೆಗೆ ರಾಜ್ಯ ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಹೊಸ ಆಸ್ಪತ್ರೆ ಕಟ್ಟಡದ ಉದ್ಘಾಟಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಆಸ್ಥೆವಹಿಸಬೇಕು~ ಎಂಬುದು ಹಿರಿಯ ನಾಗರಿಕ ಸಿದ್ದಶೆಟ್ಟಿ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.