ADVERTISEMENT

ಜಿಲ್ಲಾ ಕೇಂದ್ರಕ್ಕೆ ಐಟಿಐ ಕಾಲೇಜು ಮಂಜೂರು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 6:00 IST
Last Updated 16 ಆಗಸ್ಟ್ 2012, 6:00 IST

ಚಾಮರಾಜನಗರ: `ಜಿಲ್ಲಾ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಐಟಿಐ ಕಾಲೇಜು ಮಂಜೂರಾಗಿದೆ~ ಎಂದು ಶಾಸಕ ಪ್ರಸ್ತುತ ಐಟಿಐ ಕಾಲೇಜು ಸ್ಥಾಪನೆಗೆ ಜಿಲ್ಲಾ ಕೇಂದ್ರದಲ್ಲಿ ಸೂಕ್ತ ನಿವೇಶನ ಲಭಿಸುತ್ತಿಲ್ಲ. ಅಮಚವಾಡಿ ಅಥವಾ ವೆಂಕಟಯ್ಯನಛತ್ರದ ಭಾಗದಲ್ಲಿ ಸ್ಥಳ ದೊರೆತರೆ ಇಲ್ಲಿಯೇ ಕಾಲೇಜು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಹೇಳಿದರು.

ತಾಲ್ಲೂಕಿನ ಅಮಚವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿ ಅವರು ಮಾತನಾಡಿದರು.

ಪ್ರಸ್ತುತ ಐಟಿಐ ಕಾಲೇಜು ಸ್ಥಾಪನೆಗೆ ಜಿಲ್ಲಾ ಕೇಂದ್ರದಲ್ಲಿ ಸೂಕ್ತ ನಿವೇಶನ ಲಭಿಸುತ್ತಿಲ್ಲ. ಅಮಚವಾಡಿ ಅಥವಾ ವೆಂಕಟಯ್ಯನಛತ್ರದ ಭಾಗದಲ್ಲಿ ಸ್ಥಳ ದೊರೆತರೆ ಇಲ್ಲಿಯೇ ಕಾಲೇಜು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಈ ಶಾಲೆಗಳಲ್ಲೂ ಈಚೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿರುವುದೇ ಇದಕ್ಕೆ ಸಾಕ್ಷಿ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರದ ನೌಕರಿ ಪಡೆಯಲು ಬಾರಿ ಪೈಪೋಟಿ ನಡೆಯುತ್ತದೆ. ಹೀಗಾಗಿ, ಸರ್ಕಾರದಿಂದ ದೊರೆಯುವ ಸೌಲಭ್ಯ ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಆರ್. ಕಾವೇರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷ ಪಿ. ಮಹಾಲಿಂಗಸ್ವಾಮಿ, ಸದಸ್ಯರಾದ ಕಾಂತಮಣಿ, ಚಿಕ್ಕಮಹದೇವು, ಆರ್. ಮಹದೇವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟಚಲಂ, ಹರದನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಮುಖ್ಯಶಿಕ್ಷಕ ಕೆಂಪನಪುರ ಸಿದ್ದರಾಜು, ರವಿಗೌಡ ಹಾಜರಿದ್ದರು.

ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ
ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಈಚೆಗೆ ನಡೆದ ಪಕ್ಷದ ಜಿಲ್ಲಾ ಘಟಕದ ಕಾರ್ಯಕಾರಿಣಿಯಲ್ಲಿ ನೂತನವಾಗಿ ನೇಮಕವಾದ ಜಿಲ್ಲೆಯ 8 ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಿಗೆ ಶಾಸಕ ಎಚ್.ಎಸ್.ಮಹದೇವಪ್ರಸಾದ್ ಆದೇಶ ಪತ್ರ ವಿತರಿಸಿದರು.

ಚಾಮರಾಜನಗರ ಬ್ಲಾಕ್ ಅಧ್ಯಕ್ಷೆ ಚಿನ್ನಮ್ಮ, ಚಾಮರಾಜನಗರ ಗ್ರಾಮಾಂತರ ಬ್ಲಾಕ್ ಅಧ್ಯಕ್ಷೆ ಕೆ.ಕೆ. ಯಶೋದ, ಗುಂಡ್ಲುಪೇಟೆ ಬ್ಲಾಕ್ ಅಧ್ಯಕ್ಷೆ ಲತಾ ಶೆಟ್ಟಿ, ಬೇಗೂರು ಬ್ಲಾಕ್ ಅಧ್ಯಕ್ಷೆ ಶೈಲಜಾ, ಕೊಳ್ಳೇಗಾಲ ಬ್ಲಾಕ್ ಅಧ್ಯಕ್ಷೆ ಬಿ. ಮೀನಾಕ್ಷಿ, ಯಳಂದೂರು ಬ್ಲಾಕ್ ಅಧ್ಯಕ್ಷೆ ರಾಜಮ್ಮ, ಹನೂರು ಬ್ಲಾಕ್ ಅಧ್ಯಕ್ಷೆ ರಾಜೇಶ್ವರಿ ಹಾಗೂ ರಾಮಾಪುರ ಬ್ಲಾಕ್ ಅಧ್ಯಕ್ಷೆ ಸಾಗಾಯಿ ಮೇರಿ ಅವರಿಗೆ ಆದೇಶ ಪತ್ರ ನೀಡಲಾಯಿತು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಮಾಜಿ ಶಾಸಕರಾದ ಸಿ. ಗುರುಸ್ವಾಮಿ, ಜಯಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ. ರಾಜೇಶ್ವರಿ, ಬಿ.ಪಿ. ಪುಟ್ಟಬುದ್ಧಿ, ಆರ್. ಕಾವೇರಿ, ಕೊಪ್ಪಾಳಿ ಮಹದೇವನಾಯಕ, ಕೇತಮ್ಮ, ಶಿವಮ್ಮ, ಅಂಬಿಕಾ, ರತ್ನಮ್ಮ ಹಾಜರಿದ್ದರು.

ಮಹದೇಶ್ವರ ರಥಯಾತ್ರೆಗೆ ಚಾಲನೆ
ಶ್ರೀಮಲೆಮಹದೇಶ್ವರ ಜಯಂತಿ ಮಹೋತ್ಸವ ಸಮಿತಿಯಿಂದ ಆ.16ರಂದು ಬೆಳಿಗ್ಗೆ 8ಗಂಟೆಗೆ ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಮಹದೇಶ್ವರ ರಥಯಾತ್ರೆಗೆ ಚಾಲನೆ ನೀಡಲಾಗುವುದು.

ಮೈಸೂರಿನಲ್ಲಿ ಸೆ. 8 ಮತ್ತು 9ರಂದು ನಡೆಯಲಿರುವ ಮಹದೇಶ್ವರ ಜಯಂತಿ ಅಂಗವಾಗಿ ಈ ರಥಯಾತ್ರೆ ಆಯೋಜಿಸಲಾಗಿದೆ. ಚಾಮರಾಜನಗರ ತಾಲ್ಲೂಕಿನ ಎಲ್ಲ ಗ್ರಾಮಗಳು, ಪಟ್ಟಣ ಪ್ರದೇಶದಲ್ಲಿ ಸೆ. 6ರವರೆಗ ಯಾತ್ರೆ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಡಕೆ ಒಡೆಯುವ ಸ್ಪರ್ಧೆ ಇಂದು
ಚಾಮರಾಜನಗರದ ರಥದ ಬೀದಿಯಲ್ಲಿ ಆ. 16ರಂದು ಮಧ್ಯಾಹ್ನ 2ಗಂಟೆಗೆ ಮೊಸರಿನ ಮಡಕೆ ಒಡೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಶ್ರೀಕೃಷ್ಣ ಪ್ರತಿಷ್ಠಾನದಿಂದ ಕಾರ್ಯಕ್ರಮ ನಡೆಯಲಿದ್ದು, ಭುವನೇಶ್ವರಿ ವೃತ್ತದಿಂದ ರಥದ ಬೀದಿವರೆಗೆ ಮೆರವಣಿಗೆ ನಡೆಯಲಿದೆ. ಮೈಸೂರಿನ ಇಸ್ಕಾನ್ ಸಂಸ್ಥೆಯ ಸರ್ವಾನಂದ ಗೌರಂಗದಾಸ್ ನೇತೃತ್ವ ವಹಿಸಲಿದ್ದಾರೆ.

ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಸಿ. ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಗಣೇಶ್ ದೀಕ್ಷಿತ್, ಲಕ್ಷ್ಮೀಶ್, ಎಚ್.ವಿ. ರಾಜೀವ್, ನಟರಾಜ ಜೋಯಿಸ್ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.