ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ

ಬಿಜೆಪಿಯಲ್ಲಿ ಆರದ ಅಸಮಾಧಾನ; ನಾಗಶ್ರೀ ಬೆಂಬಲಿಗರ ಸಭೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 6:28 IST
Last Updated 21 ಏಪ್ರಿಲ್ 2018, 6:28 IST

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಪಕ್ಷದಲ್ಲಿ ಭುಗಿಲೆದ್ದಿದ್ದ ಭಿನ್ನಮತ ಶಮನವಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಪ್ರಮುಖ ಟಿಕೆಟ್ ಆಕಾಂಕ್ಷಿ ನಾಗಶ್ರೀ ಪ್ರತಾಪ್ ಅವರ ತಂದೆ ಮಾಜಿ ಶಾಸಕ ಸಿ.ಗುರುಸ್ವಾಮಿ ಅವರ ನಿವಾಸದಲ್ಲಿ ಗುರುವಾರ ಬೆಂಬಲಿಗರ ಸಭೆ ನಡೆದು, ಅಸಮಾಧಾನ ಬಗೆಹರಿಸಲು ಏ.23ರ ಗಡುವು ವಿಧಿಸಲಾಯಿತು.

23ರ ಒಳಗೆ ನಾಗಶ್ರೀ ಅಥವಾ ಅವರ ತಂದೆ ಗುರುಸ್ವಾಮಿ ಅವರ ಜತೆ ವರಿಷ್ಠರು ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಗುರುಸ್ವಾಮಿ ಅವರಿಗೆ ಪಕ್ಷದ ಜಿಲ್ಲಾ ಘಟಕದ ಸ್ಥಾನ ನೀಡಬೇಕು. ನಾಗಶ್ರೀ ಅವರಿಗೆ ಉತ್ತಮ ಸ್ಥಾನ ಕಲ್ಪಿಸುವ ಭರವಸೆ ನೀಡಬೇಕು. ಇಲ್ಲದಿದ್ದರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ADVERTISEMENT

ಕೆಲವು ಕಾರ್ಯಕರ್ತರು ಪಕ್ಷ ಅಧಿಕಾರಕ್ಕೆ ಬರಬೇಕು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಯಾಗಬೇಕು. ಹಾಗಾಗಿ, ಬಂಡಾಯ ಸ್ಪರ್ಧೆ ಬೇಡ ಎಂದರು.

ಆದರೆ, ಹಲವು ಕಾರ್ಯಕರ್ತರು ಇದಕ್ಕೆ ಅಪಸ್ವರ ತೆಗೆದರು. ಈಗಾಗಲೇ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನಪ್ಪ ರಾಜೀನಾಮೆ ನೀಡಿ, ಆ ಸ್ಥಾನವನ್ನು ಗುರುಸ್ವಾಮಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಕೂಡಲೇ ಮಲ್ಲಿಕಾರ್ಜುನಪ್ಪ ಇಲ್ಲಿಗೆ ಬಂದು ಆಶ್ವಾಸನೆ ನೀಡಬೇಕು ಎಂದು ಹಲವರು ಆಗ್ರಹಿಸಿದರು. ಈ ಹಂತದಲ್ಲಿ ಮಲ್ಲಿಕಾರ್ಜುನಪ್ಪ ಅವರನ್ನು ಸಭೆಗೆ ಕರೆಸುವ ಪ್ರಯತ್ನ ನಡೆಸಿದರು. ಆದರೆ, ಮಲ್ಲಿಕಾರ್ಜುನಪ್ಪ ಸಭೆಗೆ ಬರಲಿಲ್ಲ.

ಅಂತಿಮವಾಗಿ ಏ.23ರ ಗಡುವು ವಿಧಿಸಿದ ಕಾರ್ಯಕರ್ತರು ಅಷ್ಟರಲ್ಲಿ ಈ ಕುರಿತು ಅಂತಿಮ ತೀರ್ಮಾನವಾದರೆ ಮಾತ್ರ ಪ್ರಚಾರಕ್ಕೆ ಇಳಿಯುತ್ತೇವೆ. ಇಲ್ಲದಿದ್ದರೆ, ಪ್ರಚಾರಕ್ಕೆ ಬರುವುದಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಲ್ಲೂರು ಬಸವಣ್ಣ, ಅರಕಲವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆಂಪಣ್ಣ, ಕೊತ್ತಲವಾಡಿ ಗ್ರಾ.ಪಂ ಉಪಾಧ್ಯಕ್ಷ ಹೊನ್ನಪ್ಪ ಮುಖಂಡರಾದ ಬಸವಣ್ಣ, ಕೆಂಪರಾಜು, ರವಿ, ಆನಂದ್ ಸೇರಿದಂತೆ 300ಕ್ಕೂ ಅಧಿಕ ಮಂದಿ ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ.

ಸೂಕ್ತ ಸ್ಥಾನ ನೀಡುವ ಭರವಸೆ

ಸಭೆಯ ನಂತರ  ಗುರುಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಚುನಾವಣೆಯ ನಂತರ ವರಿಷ್ಠರೊಂದಿಗೆ ಮಾತನಾಡಿ ಸೂಕ್ತ ಸ್ಥಾನ ನೀಡುವ ಭರವಸೆ ನೀಡಿದರು. ದುಡುಕಿ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಹೇಳುವ ಮೂಲಕ ಮನವೊಲಿಕೆಯ ಕಸರತ್ತು ನಡೆಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.