ADVERTISEMENT

ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಚುರುಕು

ಪ್ರಜಾವಾಣಿ ವಿಶೇಷ
Published 16 ಅಕ್ಟೋಬರ್ 2012, 5:45 IST
Last Updated 16 ಅಕ್ಟೋಬರ್ 2012, 5:45 IST
ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಚುರುಕು
ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಚುರುಕು   

ಚಾಮರಾಜನಗರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಿಂಗಾರು ಹಂಗಾಮು ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ  ಉತ್ತಮ ಮಳೆ ಸುರಿದಿದೆ. ಯಳಂದೂರು ತಾಲ್ಲೂಕಿನಲ್ಲಿಯೂ ಮಳೆ ಬಿದ್ದಿದೆ. ಪೂರ್ವ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಫಸಲು ಮಳೆ ಇಲ್ಲದೆ ಒಣಗಿ ಹೋಗಿತ್ತು. ಪ್ರಸ್ತುತ ವರುಣ ಕೃಪೆ ತೋರಿರುವ ಹಿನ್ನೆಲೆಯಲ್ಲಿ ಹಸಿಕಡಲೆ, ಅಲಸಂದೆ, ಹುರುಳಿ, ಸೂರ್ಯಕಾಂತಿ, ಮುಸುಕಿನಜೋಳದ ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ವ್ಯವಸಾಯಕ್ಕೆ ಯೋಗ್ಯವಾಗಿರುವ ಕೃಷಿ ಭೂಮಿ 1,58,962 ಹೆಕ್ಟೇರ್. ಪೂರ್ವ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಒಟ್ಟು 69,156 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾ ಗಿತ್ತು. ಆದರೆ, ಮೇ ಎರಡನೇ ವಾರದಿಂದ ಮಳೆರಾಯ ಮುನಿಸು ತೋರಿದ. ಹೀಗಾಗಿ, ಫಸಲು ಒಣಗಿಹೋಗಿ ಒಟ್ಟು 94.45 ಕೋಟಿ ರೂ ಬೆಳೆ ನಷ್ಟವಾಗಿತ್ತು.

ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ಮಳೆ ರಾಯನ ಮುನಿಸು ಮರೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಳೆ ಮುಂದುವರಿದರೆ ಕೆರೆ-ಕಟ್ಟೆಗಳು ಭರ್ತಿಯಾಗುತ್ತವೆ ಎಂಬ ಆಸೆಯೂ ಗರಿಗೆದರಿದೆ.

ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಿನಿಂದ ಹಿಂಗಾರು ಹಂಗಾಮು ಆರಂಭವಾಗುತ್ತದೆ. ಈ ಅವಧಿಯಲ್ಲಿ ಒಟ್ಟು 56 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಕೃಷಿ ಇಲಾಖೆಯು ಗುರಿ ನಿಗದಿಪಡಿಸಿಕೊಂಡಿದೆ. ಇದರಲ್ಲಿ ಹುರುಳಿ ಬಿತ್ತನೆ ಪ್ರದೇಶ 38 ಸಾವಿರ ಹೆಕ್ಟೇರ್ ಇದೆ. ಸೆಪ್ಟೆಂಬರ್ ಎರಡನೇ ವಾರದಿಂದ ಸುರಿದ ಮಳೆಯ ಹಿನ್ನೆಲೆಯಲ್ಲಿ ಈಗಾಗಲೇ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಶೇ. 30ರಷ್ಟು ಪೂರ್ಣಗೊಂಡಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಗುಂಡ್ಲುಪೇಟೆ ಭಾಗದಲ್ಲಿ ರೈತರು ಹೆಚ್ಚಾಗಿ ಹಸಿಕಡಲೆ ಬಿತ್ತನೆಗೆ ಮುಂದಾಗಿದ್ದಾರೆ. ಕೃಷಿ ಇಲಾಖೆಗೆ 1 ಸಾವಿರ ಕ್ವಿಂಟಲ್ ಹಸಿಕಡಲೆ ಪೂರೈಕೆಯಾಗಿದ್ದು, ಇದರಲ್ಲಿ ಅರ್ಧದಷ್ಟು ಬಿತ್ತನೆಬೀಜವನ್ನು ರೈತರಿಗೆ ವಿತರಿಸಲಾಗಿದೆ. 340 ಕ್ವಿಂಟಲ್‌ನಷ್ಟು ಸೂರ್ಯಕಾಂತಿ ಬಿತ್ತನೆಬೀಜ ದಾಸ್ತಾನಿದೆ. ರೈತರೇ ಹುರುಳಿ ಬಿತ್ತನೆ ಮಾಡುತ್ತಾರೆ. ಹೀಗಾಗಿ, ಬಿತ್ತನೆಬೀಜದ ಕೊರತೆ ಇಲ್ಲ ಎಂಬುದು ಅಧಿಕಾರಿಗಳ ವಿವರಣೆ.

ಹರ್ಷ ತಂದ ಮಳೆ
ಈ ವರ್ಷದ ಜನವರಿಯಿಂದ ಆಗಸ್ಟ್‌ವರೆಗೆ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 383 ಮಿ.ಮೀ. ಆದರೆ, ಆಗಸ್ಟ್ ಅಂತ್ಯದವರೆಗೆ ಜಿಲ್ಲೆಯಲ್ಲಿ 220.19 ಮಿ.ಮೀ. ಮಳೆಯಾಗಿತ್ತು. ಆದರೆ, ನಿಗದಿತ ಅವಧಿಯೊಳಗೆ ಮಳೆ ಸುರಿಯಲಿಲ್ಲ. ಮಳೆರಾಯನ ಮುನಿಸಿಗೆ ರೈತರು ಹಾಗೂ ಜಾನುವಾರು ಬದುಕು ಉಸಿರುಗಟ್ಟುವ ಸ್ಥಿತಿ ತಲುಪಿತ್ತು.

ವರುಣನ ಅವಕೃಪೆ ಪರಿಣಾಮ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ರೈತರು ಕೈಸುಟ್ಟುಕೊಂಡಿದ್ದರು. ಕಳೆದ ಮೂರ‌್ನಾಲ್ಕು ದಿನದಿಂದ ಸುರಿಯುತ್ತಿರುವ ದಾಖಲೆ ಪ್ರಮಾಣದ ಮಳೆಯಿಂದ ಜಾನುವಾರುಗಳಿಗೆ ಕನಿಷ್ಠ ಮೇವು ದೊರೆಯುತ್ತದೆ ಎಂಬ ಆಶಾಭಾವ ರೈತರಲ್ಲಿ ಮೂಡಿದೆ.ಸಿದ್ಧತೆ ನಡೆಸಿರುವ ರೈತರು ರಸಗೊಬ್ಬರದ ಅಂಗಡಿಗಳಿಗೆ ಗೊಬ್ಬರ ಖರೀದಿಸಲು ಲಗ್ಗೆ ಇಟ್ಟಿದ್ದಾರೆ.

`ಮಳೆ ಬೀಳುತ್ತಿರುವುದರಿಂದ ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಬಿತ್ತನೆ ಚುರುಕುಗೊಂಡಿದೆ. ಹಸಿಕಡಲೆ, ಸೂರ್ಯಕಾಂತಿ, ಮುಸುಕಿನಜೋಳ ಸೇರಿದಂತೆ ಯಾವುದೇ ಬಿತ್ತನೆಬೀಜದ ಕೊರತೆಯಿಲ್ಲ. ರಸಗೊಬ್ಬರದ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ~ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ. ಚಂದ್ರಶೇಖರ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.