ADVERTISEMENT

ಜಿಲ್ಲೆಯ ವಿವಿಧೆಡೆ ಚುನಾವಣಾ ಜಾಗೃತಿ ಜಾಥಾ

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‌ಕುಮಾರ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 7:08 IST
Last Updated 7 ಏಪ್ರಿಲ್ 2018, 7:08 IST

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಮತದಾನ ಕುರಿತ ಜಾಗೃತಿ ಜಾಥಾಗಳು ಶುಕ್ರವಾರ ನಡೆದವು.ಚಾಮರಾಜನಗರದ ಚಾಮ ರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಶುಕ್ರವಾರ ವಿಧಾನಸಭಾ ಚುನಾವಣೆ ಅಂಗವಾಗಿ ‘ಸ್ವೀಪ್’ ಸಮಿತಿಯಿಂದ ಆಯೋಜಿಸಿದ್ದ ವಿವಿಧ ಕಾಲೇಜು ವಿದ್ಯಾರ್ಥಿಗಳ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‌ಕುಮಾರ್‌ ಚಾಲನೆ ನೀಡಿದರು.ಈ ವೇಳೆ ಅವರು ವಿದ್ಯಾರ್ಥಿಗಳಿಗೆ ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಾಥಾದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸೇವಾ ಭಾರತಿ ಶಿಕ್ಷಣ ಸಂಸ್ಥೆ, ಸಿದ್ಧಾರ್ಥ ಪ್ರಥಮದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.

ಸಂತೇಮರಹಳ್ಳಿ: ಸಮೀಪದ ಕಮರವಾಡಿ ಗ್ರಾಮದಲ್ಲಿ ಶುಕ್ರವಾರ ಚುನಾವಣಾ ಅಂಗವಾಗಿ ದೇಮಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಜಾಗೃತಿ ಜಾಥಾದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಭಾಗವಹಿಸಿದ್ದರು.

ADVERTISEMENT

ಪಿಡಿಒ ರಾಮೇಗೌಡ ಮಾತನಾಡಿ, ‘ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತ ಚಲಾಯಿಸುವುದು ಎಲ್ಲರ ಹಕ್ಕು ಹಾಗೂ ಕರ್ತವ್ಯವಾಗಿದೆ. ಮತದಾನದಿಂದ ಯಾರೂ ವಂಚಿತರಾಗಬಾರದು. ಚುನಾವಣೆ ಸಮಯದಲ್ಲಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಬೇಕು’ ಎಂದರು.

ಕಾರ್ಯದರ್ಶಿ ನಾಗರಾಜಪ್ಪ, ಮುಖಂಡರಾದ ಬಸವರಾಜು, ರತ್ನಮ್ಮ ಹಾಗೂ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.ಜಾಥಾವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚುನಾವಣೆ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿತು.

ಕೊಳ್ಳೇಗಾಲ: ನಗರದ ಎಂಜಿಎಸ್‌ವಿ ಕಾಲೇಜು ಆವರಣದಲ್ಲಿ ಶುಕ್ರವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು ಎಸ್‌ವಿಇಇಪಿ ಸಮಿತಿಯಿಂದ ಮತದಾನ ಜಾಗೃತಿ ಅರಿವು ಜಾಥಾ ನಡೆಯಿತು.

ಜಾಥಾವು ನಗರದ ಡಾ. ರಾಜ್‍ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಗುರುಸ್ವಾಮಿ ಮಾತನಾಡಿ, ‘18 ವರ್ಷದ ತುಂಬಿದ ಪ್ರತಿಯೊಬ್ಬರು ಮತದಾನದ ಮಾಡ ಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೆ ಪ್ರಜ್ಞಾ ಹಾಗೂ ನೈತಿಕ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

ಜಾಥಾದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು ಎಸ್‌ವಿಇಇಪಿ ಆಡಳಿತ ವರ್ಗದವರು, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಹೋಬಳಿಯ ಮೇಲುಕಾಮನಹಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಹಂಗಳ ಗ್ರಾಮ ಪಂಚಾಯಿತಿ ಸ್ವೀಪ್ ಸಮಿತಿ ವತಿಯಿಂದ ಮತದಾನ ಅರಿವು ಮೂಡಿಸಲಾಯಿತು.ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸಿ ಮತದಾನದ ಪ್ರಾಮುಖ್ಯತೆಯ ಬಗ್ಗೆ ಘೋಷಣೆಗಳನ್ನು ಕೂಗಿದರು.

ಪಿಡಿಒ ಕುಮಾರಸ್ವಾಮಿ ಮಾತನಾಡಿ, ಮತದಾನ ಎಲ್ಲರ ಹಕ್ಕು. ಅದನ್ನು ಕಡ್ಡಾಯವಾಗಿ ಚಲಾಯಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು ಎಂದು ತಿಳಿಸಿದರು.

ಶಿಕ್ಷಕರಾದ ಜಗದೀಶ್, ಶಿವಶಂಕರ್, ಬಿಎಲ್‍ಒ ಭಾಗ್ಯಾ, ಆಶಾ ಕಾರ್ಯಕರ್ತೆ ವಿಶಾಲಾಕ್ಷಿ ಮತ್ತು ಪಂಚಾಯಿತಿ ಸಿಬ್ಬಂದಿ ರಾಜು, ನಂದೀಶ್, ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.