ADVERTISEMENT

ತರಕಾರಿ, ಹೂ, ಹಣ್ಣು ಧಾರಣೆ ಸ್ಥಿರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 7:10 IST
Last Updated 26 ಡಿಸೆಂಬರ್ 2017, 7:10 IST
ಚಾಮರಾಜನಗರದ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಭರಾಟೆ
ಚಾಮರಾಜನಗರದ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಭರಾಟೆ   

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಕಳೆದ ಮೂರು, ನಾಲ್ಕು ತಿಂಗಳಿನಿಂದ ಏರಿಳಿತ ಕಾಣುತ್ತಿದ್ದ ತರಕಾರಿ, ಹೂವು ಹಾಗೂ ಹಣ್ಣಿನ ಬೆಲೆಗಳಲ್ಲಿ ಎರಡು ವಾರಗಳಿಂದ ಸ್ಥಿರತೆ ಕಂಡು ಬಂದಿದೆ. ತರಕಾರಿಗಳ ದರ ಗ್ರಾಹಕ ಸ್ನೇಹಿಯಾಗಿ ಪರಿಣಮಿಸಿದೆ.

ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಿನಲ್ಲಿ ತರಕಾರಿಗಳ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದರು. ಕೆಲವು ತರಕಾರಿಗಳು ಪ್ರತಿ ಕೆ.ಜಿಗೆ ₹ 50 ರಿಂದ 60ಕ್ಕೆ ಮಾರಾಟವಾಗುತ್ತಿದ್ದವು. ನಂತರದ ದಿನಗಳಲ್ಲಿ ಬೆಲೆ ಕುಸಿತ ಉಂಟಾಯಿತು. ಕಳೆದ ವಾರ ಟೊಮೆಟೊ ಧಾರಣೆ ಏಕಾಏಕಿ ಕುಸಿತವಾಗಿ ಕೆ.ಜಿಗೆ ₹ 5 ರಿಂದ 10ರಂತೆ ಮಾರಾಟವಾಗುತ್ತಿದೆ. ಇದರಿಂದ ಬೆಳೆ ಬೆಳೆಯುವುದಕ್ಕೆ ಹಾಕಿದ ಖರ್ಚು ಕೂಡ ಬಾರದಂತೆ ಆಗಿದ್ದು, ರೈತರು ಕಂಗೆಟ್ಟಿದ್ದಾರೆ.

ವರ್ಷಾಂತ್ಯದಲ್ಲಿ ಒಂದೆರಡು ತರಕಾರಿಗಳನ್ನು ಹೊರತುಪಡಿಸಿದರೆ ಉಳಿದ ತರಕಾರಿಗಳ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ. ಸಣ್ಣ ಈರುಳ್ಳಿ ಮತ್ತು ನುಗ್ಗೆಕಾಯಿ ಧಾರಣೆ ಕೆ.ಜಿ.ಗೆ ₹ 180 ರಿಂದ 200 ಇದ್ದು, ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ADVERTISEMENT

‘ಮಾರುಕಟ್ಟೆಗೆ ತರಕಾರಿ ಪೂರೈಕೆ ಪ್ರಮಾಣ ಕಳೆದ ವಾರದಿಂದ ಹೆಚ್ಚಾಗಿರುವುದರಿಂದ ಬೆಲೆ ಇಳಿಕೆಯಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಸಂಚಾರ ಸ್ಥಗಿತವಾಗಿರುವುದರಿಂದ ವ್ಯಾಪಾರಕ್ಕೆ ಹಿನ್ನಡೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ರಂಗಸ್ವಾಮಿ ತಿಳಿಸಿದರು.

ಹಣ್ಣು, ಹೂವು ಸ್ಥಿರ: ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂವಿನ ಧಾರಣೆ ಸ್ಥಿರವಾಗಿದೆ. ಏಲಕ್ಕಿ ಬಾಳೆ ಹಣ್ಣಿನ ಬೆಲೆ ಕೆ.ಜಿ.ಗೆ ₹ 50 ಹಾಗೂ ಪಚ್ಚಬಾಳೆ ಹಣ್ಣಿಗೆ ₹ 30ರಿಂದ 40 ಧಾರಣೆ ಇದೆ. ಹೂವಿನ ಬೆಲೆ ಕೊಂಚ ಇಳಿಕೆಯಾಗಿದೆ. ಚೆಂಡು ಹೂವು ₹ 10, ಮಲ್ಲಿಗೆ ₹ 40ರಿಂದ 50, ಕಾಕಡ ₹ 10, ಕನಕಾಂಬರ ₹ 40ರಿಂದ 50, ಸೂಜಿ ಮಲ್ಲಿಗೆ ₹ 10, ಗುಲಾಬಿ ₹ 5 ಹಾಗೂ ಹೂವಿನ ಹಾರ ₹ 50ರಿಂದ 300ರವರೆಗೂ ಮಾರಾಟವಾಗುತ್ತಿವೆ.

ತರಕಾರಿ ಬೆಲೆ (ಕೆ.ಜಿಗೆ)

ಹಸಿಮೆಣಸಿಕಾಯಿ ₹ 20

ಬೂದುಗುಂಬಳ ₹ 20

ಸಿಹಿಕುಂಬಳ ಕಾಯಿ ₹ 15

ಬಿಳಿ ಬದನೆಕಾಯಿ ₹ 20

ಬೀನ್ಸ್‌  ₹ 20

ಕ್ಯಾರೆಟ್‌  ₹ 30

ಸೌತೆಕಾಯಿ  ₹ 20

ಆಲೂಗೆಡ್ಡೆ  ₹ 20

ಮೂಲಂಗಿ  ₹ 20

ಶುಂಠಿ  ₹ 50

ಬೀಟ್‌ರೂಟ್‌ ₹ 30

ಹಿರೇಕಾಯಿ  ₹ 30

ಅವರೆಕಾಯಿ  ₹ 40

ತೊಗರಿಕಾಯಿ ₹ 30

ಹಣ್ಣಿನ ಧಾರಣೆ (ಕೆ.ಜಿಗೆ)

ಸೇಬು ₹ 80 ರಿಂದ 100

ಕಿತ್ತಳೆ ₹ 60 ರಿಂದ 80

ಮೊಸಂಬಿ ₹ 80

ದ್ರಾಕ್ಷಿ ₹ 100

ದಾಳಿಂಬೆ ₹ 100

ಸಪೋಟಾ ₹ 60

* * 

ಮಾರುಕಟ್ಟೆಗೆ ನಗರದ ಸುತ್ತಲಿನ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ತರಕಾರಿ ಪೂರೈಕೆಯಾಗುತ್ತಿದೆ. ಹಾಗಾಗಿ, ಬೆಲೆ ಇಳಿಕೆಯಾಗಿದೆ.
ಭಾಗ್ಯಮ್ಮ, ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.