ADVERTISEMENT

ತಾರಕಕ್ಕೇರಿದ ಮತಯಾಚನೆ; ಪ್ರಚಾರ

ಮತಯಾಚನೆಗೆ ತೊಡಕಾದ ಮಳೆ, ಗಾಳಿ

​ಪ್ರಜಾವಾಣಿ ವಾರ್ತೆ
Published 9 ಮೇ 2018, 8:50 IST
Last Updated 9 ಮೇ 2018, 8:50 IST
ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ವ್ಯಾಪ್ತಿಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಪರ ಅವರ ಪುತ್ರಿಯರಾದ ವೇದಾವತಿ ಪ್ರಕಾಶ್, ಶೀಲಾ ರಾಮು ಅವರು ಮಂಗಳವಾರ ಬಿರುಸಿನ ಮತಯಾಚನೆ ನಡೆಸಿದರು
ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ವ್ಯಾಪ್ತಿಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಪರ ಅವರ ಪುತ್ರಿಯರಾದ ವೇದಾವತಿ ಪ್ರಕಾಶ್, ಶೀಲಾ ರಾಮು ಅವರು ಮಂಗಳವಾರ ಬಿರುಸಿನ ಮತಯಾಚನೆ ನಡೆಸಿದರು   

ಚಾಮರಾಜನಗರ: ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರ ಗೆಲುವು ಖಚಿತ ಎಂದು ಕಾಂಗ್ರೆಸ್ ಮುಖಂಡ ಎಂ.ರಾಮಚಂದ್ರು ವಿಶ್ವಾಸ ವ್ಯಕ್ತಪಡಿಸಿದರು.

ಅವರು ಚಾಮರಾಜನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹರದನಹಳ್ಳಿ, ಬಂಡಿಗೆರೆ, ತಾವರಕಟ್ಟೆ ಮೋಳೆ, ಡೊಳ್ಳಿಪುರ, ಬ್ಯಾಡಮೂಡ್ಲು, ದೊಡ್ಡ ಮೋಳೆ, ಚಿಕ್ಕಮೋಳೆ, ಚಂದುಕಟ್ಟೆ ಮೋಳೆ ಗ್ರಾಮಗಳಲ್ಲಿ ಮಲ್ಲಿಕಾರ್ಜುನಪ್ಪ ಅವರ ಜೊತೆ ಬಿರುಸಿನ ಪ್ರಚಾರ ನಡೆಸಿದರು. ಕೆಲವೆಡೆ ರೋಡ್ ಷೋ ನಡೆಸಿದರು.

‘ಬಿ.ಎಸ್.ಯಡಿಯೂರಪ್ಪ ಅವರು ಸಹ ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರ ಜಿಲ್ಲೆಯ 20 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಚಾಮರಾಜನಗರ ಜಿಲ್ಲೆಯ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಲೆ ಎದ್ದಿದೆ. ಹೀಗಾಗಿ, ನಮ್ಮ ಪಕ್ಷ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರು ಅತ್ಯಧಿಕ ಮತಗಳಿಂದ ಜಯ ಗಳಿಸಲಿದ್ದಾರೆ’ ಎಂದು ರಾಮಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಉಪ್ಪಾರ ಮುಖಂಡ ಹನುಮಂತ ಶೆಟ್ಟಿ ಮಾತನಾಡಿ, ‘ಚಾಮರಾಜನಗರ ಕ್ಷೇತ್ರ ಶಾಸಕರಾಗಿದ್ದ ಪಟ್ಟರಂಗಶೆಟ್ಟಿ ಅವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಉಪ್ಪಾರ ಸಮುದಾಯದ ಬೀದಿಗೆ ಹೋದರೆ ಅಲ್ಲಿ ಚರಂಡಿ, ರಸ್ತೆಗಳಾಗಲಿ ಇಲ್ಲ. ಇನ್ನು ಈ ವರ್ಗದ ಅಭಿವೃದ್ಧಿಗೆ ಏನೂ ಕೆಲಸ ಮಾಡಿಲ್ಲ. ಇದರಿಂದ ಈ ಬಾರಿ ಉಪ್ಪಾರ ಸಮುದಾಯವು ಅವರನ್ನು ತಿರಸ್ಕರಿಸಬೇಕು ಮತ್ತು ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರಿಗೆ ಮತ ನೀಡುವ ಮೂಲಕ ಅತ್ಯಧಿಕ ಮತದಿಂದ ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಮಂಗಲ ಶಿವ ಕುಮಾರ್, ಕೆಲ್ಲಂಬಳ್ಳಿ ಸೋಮನಾಯಕ, ಕಂಡಕ್ಟರ್ ಸೋಮನಾಯಕ, ತಾಲೂಕು ಬಿಜೆಪಿ ಅಧ್ಯಕ್ಷ ಸುಂದರಪ್ಪ, ಕಾಗಲವಾಡಿಕಾರ್ತೀಕ್, ಚಾ.ಹ.ರಾಮು, ವೆಂಕಟಯ್ಯನಛತ್ರ ಗ್ರಾ.ಪಂ.ಅಧ್ಯಕ್ಷ ಸೋಮಣ್ಣ ಹಾಜರಿದ್ದರು.

ತಂದೆ ಪರ ಪುತ್ರಿಯರ ಮತಯಾಚನೆ ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ವ್ಯಾಪ್ತಿಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಪರ ಪುತ್ರಿಯರಾದ ವೇದಾವತಿ ಪ್ರಕಾಶ್, ಶೀಲಾ ರಾಮು ಅವರು ಬಿರುಸಿನ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಮಾದಮ್ಮ ಸದಸ್ಯ ನಾಗಮ್ಮ ಲಕ್ಷಮ್ಮ ಮಹೇಶ್ ಮಾದೇಶ್ ಕೋಡಿಮೋಳೆ ಪ್ರಕಾಶ್ ಗ್ರಾಮದ ಮುಖಂಡರು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ವಕೀಲರು ಬೆಂಬಲಿಸುವಂತೆ ಅಭ್ಯರ್ಥಿ ಚಿನ್ನಸ್ವಾಮಿ ಮನವಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ವಕೀಲ ಎಂ.ಚಿನ್ನಸ್ವಾಮಿ ನಗರದ ವಕೀಲರ ಸಂಘಕ್ಕೆ ತೆರಳಿ ಮತಯಾಚನೆ ಮಾಡಿದರು. ‌

‘ಸೋಮವಾರ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲು ಬಂದಿದ್ದ ವಕೀಲರ ಮಿತ್ರರನ್ನು ಸಂಘ ಭವನದಲ್ಲಿ ಭೇಟಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ತಾವೆಲ್ಲರು ನನ್ನನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು. ಹಿರಿಯ ಹಾಗು ಕಿರಿಯ ವಕೀಲರನ್ನು ಭೇಟಿಯಾಗಿ ಕರ ಪತ್ರವನ್ನು ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಇದ್ದರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಸ್ಪರ್ಧಿಸಿರುವ ವಾಟಾಳ್ ನಾಗರಾಜ್ ಅವರು ನಗರದ ವೀರಮದಕರಿ ನಾಯಕರ ಬೀದಿ, ಕರಿನಂಜನಪುರ ಬಡಾವಣೆ, ನಗರಸಭೆ ವ್ಯಾಪ್ತಿಗೆ ಬರುವ ನಗರದ ವಿವಿಧ ಬಡಾವಣೆಗಳಲ್ಲಿ ಮಂಗಳವಾರ ಸಂಚರಿಸಿ ಮತಯಾಚನೆ ಮಾಡಿದರು.

ನಂತರ ಮಾತನಾಡಿದ ವಾಟಾಳ್, ‘ಚಾಮರಾಜನಗರಕ್ಕೆ ಕಾವೇರಿ ನೀರು ಸರಿಯಾಗಿ ವಿತರಣೆಯಾಗುತ್ತಿಲ್ಲ, ಮತಯಾಚನೆ ಮಾಡುವ ಸಮಯದಲ್ಲಿ ಮಹಿಳೆಯರು, ನಮ್ಮೊಡನೆ ದೂರುತ್ತಿದ್ದಾರೆ, ಈ ಬಾರಿ ನನ್ನನ್ನು ಬೆಂಬಲಿಸಿ ಆಶೀರ್ವಾದಿಸಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಾಟಾಳ್‍ ಅವರ ಮೊಮ್ಮಗ ಚಂದನ್, ಪುತ್ರ ಮಹದೇವಪ್ರಸಾದ್, ಕೆಂಪಣ್ಣ, ರಾಜಣ್ಣ, ಕ್ಯಾಂಟೀನ್ ಕುಮಾರ್, ಶ್ರೀನಿವಾಸಗೌಡ, ವರದನಾಯಕ, ಗೋವಿಂದನಾಯಕ, ಬಸವರಾಜು, ಶಿವಲಿಂಗಮೂರ್ತಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.