ಕೊಳ್ಳೇಗಾಲ: ದುರಸ್ತಿಯಲ್ಲಿರುವ ಕಾಂಪೌಂಡ್ ಸರ್ಕಾರಿ ಪ್ರಾಥಮಿಕ ಶಾಲೆ, ಆಯುರ್ವೇದ ಆಸ್ಪತ್ರೆ. ವ್ಯರ್ಥವಾಗಿರುವ ಕಿರುನೀರು ಯೋಜನೆ. ನೀರಿಗಾಗಿ ಬೋರ್‌ವೆಲ್ ಬಳಿ ಪರದಾಡುವ ಮಹಿಳೆಯರು....
ಇಂಥ ಸಮಸ್ಯೆಗಳ ಸರಮಾಲೆ ಕಂಡು ಬರುವುದು ಕೊಳ್ಳೇಗಾಲ ತಾಲ್ಲೂಕಿನ ತಿಮ್ಮರಾಜೀಪುರದಲ್ಲಿ.
ಅಕ್ಕಪಕ್ಕದ ಗ್ರಾಮಗಳ ಮಕ್ಕಳಿಗೂ ಸೇರಿದಂತೆ ತಿಮ್ಮರಾಜೀಪುರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಶಾಲಾ ಆವರಣದಲ್ಲಿಯೇ ಆಯುರ್ವೇದ ಆಸ್ಪತ್ರೆಯೂ ಇದೆ. ಶಾಲೆಗೆ ಈ ಹಿಂದೆ ಕಾಂಪೌಂಡ್ ನಿರ್ಮಿಸಲಾಗಿತ್ತು. ಅದರ ಒಂದು ಭಾಗ ಕುಸಿದು ಬ್ದ್ದಿದು ಹಲವು ತಿಂಗಳು ಕಳೆದರೂ ಕಾಂಪೌಂಡ್ ನಿರ್ಮಾಣಕ್ಕೆ ಯಾರೂ ಮುಂದಾಗಿಲ್ಲ.
ಶಾಲೆಯ ಮುಂದಿನ ರಸ್ತೆಯಲ್ಲೇ ಪ್ರತಿನಿತ್ಯ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳು ಕಾಡಿಗೆ ಹೋಗುತ್ತವೆ. ಈ ವೇಳೆಯಲ್ಲಿ ಶಾಲೆಯ ಆವರಣದೊಳಗೆ ನುಗ್ಗಿ ಮಕ್ಕಳಿಗೆ ಕಿರಿಕಿರಿ ಉಂಟು ಮಾಡುತ್ತಿವೆ.
ಅಲ್ಲದೆ ಹಸಿರೀಕರಣಕ್ಕೂ ತೊಂದರೆಯಾಗಿದೆ. ಶಾಲಾ ಆವರಣದಲ್ಲಿಯೇ ಕಿರುನೀರು ಸರಬರಾಜು ಘಟಕ ಇದೆ. ಇಲ್ಲಿ ನಿತ್ಯ ನೀರು ಸೋರುವುದರಿಂದ ಕೊಳಚೆ ಗುಂಡಿಯಾಗಿ ಮಾರ್ಪಟ್ಟಿದೆ. ಇದರ ಬಳಿಯೇ ಆಯುರ್ವೇದ ಆಸ್ಪತ್ರೆ ಇರುವುದರಿಂದ ಈ ನೀರಿನ ಪಂಪ್ ಬಳಿ ಸ್ವಚ್ಛತೆ ಕಾಪಾಡುವ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ.
ಗ್ರಾಮದ ಕೆಲವು ಚರಂಡಿಗಳು ಕಸಕಡ್ಡಿಗಳಿಂದ ತುಂಬಿ ನಾರುತ್ತಿವೆ. ಇದರಿಂದಾಗಿ ಸೊಳ್ಳೆಗಳ ಕಾಟ ಅಧಿಕವಾಗಿದೆ. ಚರಂಡಿಗಳ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂಬುದು ಮಹಿಳೆಯರ ಮನವಿ.
ಅಲ್ಲದೆ, ಈಗ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಮಹಿಳೆಯರು ಬೋರ್‌ವೆಲ್‌ನಲ್ಲೇ ನೀರನ್ನು ಪಡೆಯುವ ಸ್ಥಿತಿ ಒದಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಿರುನೀರು ಸರಬರಾಜು ಟ್ಯಾಂಕ್‌ಗೆ ನೀರು ಪೂರೈಸಲು ಕ್ರಮಕೈಗೊಂಡು ಈ ಸಮಸ್ಯೆಯನ್ನು ತಪ್ಪಿಸಬೇಕು ಎನ್ನುತ್ತಾರೆ ಸ್ವಸಹಾಯ ಸಂಘಗಳ ಮಹಿಳೆಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.