ADVERTISEMENT

ಥಟ್ ಅಂತ ಹೇಳಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 5:40 IST
Last Updated 10 ನವೆಂಬರ್ 2012, 5:40 IST

ಯಳಂದೂರು: ಥಟ್ ಅಂತ ಹೇಳಿ...
-ಇದು ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಡಾ.ನಾ. ಸೋಮೇಶ್ವರ ನಡೆಸಿಕೊಡುವ ಸಂಸ್ಕೃತಿ ಮತ್ತು ಜ್ಞಾನ ವೃದ್ಧಿಸುವ ಜನಪ್ರಿಯ ಕಾರ್ಯಕ್ರಮ.

ಸಾಮಾನ್ಯ ಜ್ಞಾನವನ್ನು ಓರೆಗೆ ಹಚ್ಚುವ ಇಂತಹ ಕಾರ್ಯಕ್ರಮದಲ್ಲಿ ಈಚೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೂರದರ್ಶನ ವಿಶೇಷ ಕಂತುಗಳನ್ನು ಆಯೋಜಿಸಿತ್ತು.

ಇದಕ್ಕೆ ಜಿಲ್ಲೆಯ ಏಕೈಕ ಶಾಲೆಯಾಗಿ ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿ ಬರೋಬ್ಬರಿ 70 ಪುಸ್ತಕಗಳನ್ನು ಬಹುಮಾನವಾಗಿ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈಚೆಗೆ ಈ ಶಾಲಾ ಮಕ್ಕಳೇ ಕಲಿತು ಪ್ರದರ್ಶಿಸಿದ `ಕತ್ತಲ ಹೂವಿನ ಹಾಡು~ ನಾಟಕ ಪ್ರದರ್ಶನವನ್ನು ಅಂತರ್ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ಹಾಕಲಾಗಿತ್ತು. ಇದನ್ನು ಅಂತರ್ಜಾಲದಲ್ಲಿ ನೋಡಿದ ಆಯೋಜಕರು `ಥಟ್ ಅಂತ ಹೇಳಿ~ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಕ್ಷಣವೇ ಫೋನಾಯಿಸಿದರು ಎಂದು ನಾಟಕ ಶಿಕ್ಷಕ ಮಧುಕರ್ ಹೇಳುತ್ತಾರೆ.

ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಶಾಲೆಯ ವಿದ್ಯಾರ್ಥಿಗಳ ಜತೆಗೆ ವೇದಿಕೆ ಹಂಚಿಕೊಂಡು ಗುಂಬಳ್ಳಿ ಮಕ್ಕಳು ಸಂಭ್ರಮಿಸಿದರು.

`ಇದೇ ಮೊದಲ ಬಾರಿಗೆ ಬೆಂಗಳೂರು ನೋಡುವ ಅವಕಾಶ ನಮಗೆ ಸಿಕ್ಕಿತ್ತು. ನಾಟಕದಲ್ಲಿ ಅಭಿನಯಿಸಿದ್ದರಿಂದ ಕ್ಯಾಮೆರಾ ಮುಂದೆ ನಿಂತು ಚಿತ್ರೀಕರಣದಲ್ಲಿ ಭಾಗವಹಿಸಲು ಯಾವುದೇ ತೊಂದರೆಯಾಗಲಿಲ್ಲ~ ಎಂದು ವಿದ್ಯಾರ್ಥಿಗಳಾದ ಚಂದನಾ, ಗಾಯತ್ರಿ, ಅಂಕಪ್ಪ, ಸಚಿನ್, ಭರತ್, ಸಿಂಧು ಸಂತಸ ಹಂಚಿಕೊಂಡರು.

ಇವರೆಲ್ಲರೂ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಪುಸ್ತಕಗಳನ್ನು ಬಹುಮಾನವಾಗಿ ಪಡೆದಿದ್ದಾರೆ. ಶಾಲೆಯ ಮುಖ್ಯಶಿಕ್ಷಕ ಶಿವರುದ್ರಯ್ಯ, ಶಿಕ್ಷಕರಾದ ಮಧುಕರ್, ಕೃಷ್ಣಕುಮಾರ್ ಅವರ ಮಾರ್ಗದರ್ಶನ ಹಾಗೂ ಅವರು ತುಂಬಿದ ಧೈರ್ಯ ಪ್ರೋತ್ಸಾಹವೇ ತಮ್ಮನ್ನು ಈ ಮಟ್ಟಕ್ಕೆ ಕರೆದೊಯ್ಯಲು ಸಾಧ್ಯವಾಯಿತು ಎಂದು ಹೇಳುವ ಮಕ್ಕಳ ಮಾತಿನಲ್ಲಿ ಗುರುಗಳ ಬಗ್ಗೆ ಧನ್ಯತಾ ಭಾವನೆ ಮೂಡಿತ್ತು.

ಇದಲ್ಲದೆ ರಂಗ ಶಿಕ್ಷಣದಲ್ಲೂ ಪರಿಣತಿ ಹೊಂದಿರುವ ವಿದ್ಯಾರ್ಥಿಗಳು ಈಗಾಗಲೇ ಮೈಸೂರಿನ ರಂಗಾಯಣ, ಬೆಂಗಳೂರಿನ ರಂಗಶಾಲೆಗಳಲ್ಲೂ ಪ್ರದರ್ಶನ ನೀಡಿ ಉತ್ತಮ ಕಲಾವಿದರಾಗುವ ಹಾದಿಯಲ್ಲಿ ಸಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.