ADVERTISEMENT

ದಲಿತರು ಬುದ್ಧ ಪ್ರಜ್ಞೆಯತ್ತ ಸಾಗಲಿ: ಚಿನ್ನಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 8:40 IST
Last Updated 1 ಅಕ್ಟೋಬರ್ 2012, 8:40 IST

ಚಾಮರಾಜನಗರ: `ಸಮಾಜದಲ್ಲಿ ಶೋಷಣೆಗೆ ತುತ್ತಾದವರು ದಲಿತ ಪ್ರಜ್ಞೆಯಿಂದ ಬುದ್ಧ ಪ್ರಜ್ಞೆಗೆ  ಬದಲಾವಣೆಯಾಗಬೇಕಿದೆ~ ಎಂದು ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಪ್ರತಿಪಾದಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಭಾನುವಾರ ನಡೆದ ದಲಿತ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿದರು.

`ಮೇಲ್ವರ್ಗದ ಸಾಹಿತ್ಯದಲ್ಲಿ ಸತ್ವ ಇಲ್ಲ. ದಲಿತ ಸಾಹಿತ್ಯದಲ್ಲಿ ಹೆಚ್ಚಿನ ಸತ್ವವಿದ್ದು, ಅದು ಹೊರಬೇಕಿದೆ. ದಲಿತ ಸಾಹಿತ್ಯದ ಬಗ್ಗೆ ಹೆಚ್ಚಿನ ವಿಮರ್ಶೆಯೂ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಅಧ್ಯಾ ಕರು ಮುಂದಾಗುವುದು ಒಳಿತು~ ಎಂದರು. ದೇಶದ ಸಾಹಿತ್ಯದಲ್ಲೂ ದಲಿತ ಸಾಹಿತ್ಯ ಮುಂಚೂಣಿಯಲ್ಲಿದೆ. ಹಸಿವು, ಅವಮಾನ, ನೋವಿನ ಪರಂಪರೆ ಒಳಗೊಂಡಿರುವ ಈ ಸಾಹಿತ್ಯದಲ್ಲಿ ವಿವೇಕ ಹುಟ್ಟುತ್ತದೆ. ಈ ಸಾಹಿತ್ಯದಿಂದ ಹೊಸ ವಿಚಾರಧಾರೆಗಳನ್ನು ಅರಿಯಬಹುದು ಎಂದು ಹೇಳಿದರು.

ದೇಶದಲ್ಲಿ ದಲಿತ ಸಾಹಿತ್ಯ, ಸಂಸ್ಕೃತಿ, ಕಲೆಗೆ ವಿಶಿಷ್ಟ ಸ್ಥಾನಮಾನವಿದೆ. ಎಲ್ಲ ಬಗೆಯ ಶೋಷಣೆ ನಿರಾಕರಿಸುವ ಹಾಗೂ ತಾರತಮ್ಯ ವಿರೋಧಿಸುವು ದರೊಂದಿಗೆ ಎಲ್ಲರಿಗೂ ಒಳಿತು ಬಯಸುವ ವೈಶಾಲ್ಯತೆ ಇದರಲ್ಲಿ ಅಡಕವಾಗಿದೆ ಎಂದು ಬಣ್ಣಿಸಿದರು.

1997ರಲ್ಲಿ ದಲಿತ ಸಾಹಿತ್ಯ ಪರಿಷತ್ ಸ್ಥಾಪನೆಗೊಂಡಿತು. ಅಷ್ಟೇ ವೇಗವಾಗಿ ರಾಜ್ಯದ ಇತರೇ ಜಿಲ್ಲೆ ಗಳಿಗೂ ವಿಸ್ತರಣೆಗೊಂಡಿದೆ. ಗಡಿ ಜಿಲ್ಲೆ ಯಲ್ಲೂ ಅಸ್ತಿತ್ವಕ್ಕೆ ಬಂದಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಅಧ್ಯಕ್ಷತೆವಹಿಸಿದ್ದರು. ಸಾಹಿತಿ ಪ್ರೊ.ಎಲ್. ಪ್ರೇಮಶೇಖರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕ ಎಂ. ಮಲ್ಲಿಕಾರ್ಜುನಸ್ವಾಮಿ, ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಗುರುರಾಜು ಯರಗನಹಳ್ಳಿ, ಉಪಾಧ್ಯಕ್ಷ ಸಿ.ಎಂ. ನರಸಿಂಹ ಮೂರ್ತಿ, ಮಹಾದೇವ ಶಂಕನಪುರ, ಸಿ. ಸಿದ್ದರಾಜು, ಎಂ. ರಂಗಸ್ವಾಮಿ, ಎಸ್. ಕಾಳಿಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.