ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಸಣ್ಣ ರೈತರಿಗೆ ಸಹಕಾರಿ: ವಿಠಲ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 9:10 IST
Last Updated 13 ಜುಲೈ 2012, 9:10 IST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಸಣ್ಣ ರೈತರಿಗೆ ಸಹಕಾರಿ: ವಿಠಲ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಸಣ್ಣ ರೈತರಿಗೆ ಸಹಕಾರಿ: ವಿಠಲ   

ಚಾಮರಾಜನಗರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಣ್ಣ ರೈತರು ಮತ್ತು ದುರ್ಬಲ ವರ್ಗದವರಿಗೆ ಸೇವೆಯನ್ನು ನೀಡುತ್ತಾ ಬಂದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ವಿಠಲ ಪೂಜಾರಿ ಗುರುವಾರ ತಿಳಿಸಿದರು.

ನಗರದ ಆದಿವಾಸಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆವರಣದಲ್ಲಿ ಸೇವಾ ಪ್ರತಿನಿಧಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಯೋಜನೆಯಡಿ ಕಾರ್ಯಕರ್ತರಿಂದ ಅತಿ ದುರ್ಬಲರನ್ನು ಗುರುತಿಸಿ, ಅವರಿಗೆ ಮಾಸಿಕ ಸಹಾಯಧನ  ಹಾಗೂ ಯೋಜನೆಯ ಫಲಾನುಭವಿ ಕುಟುಂಬಗಳ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಕೈಗೊಳ್ಳಲು ಶಿಷ್ಯ ವೇತನವನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯು ಪ್ರಗತಿ ಬಂಧು ಎಂಬ ಸಣ್ಣ ಕೃಷಿಕರ ಗುಂಪುಗಳನ್ನು ರಚನೆ ಮಾಡಿ, ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಕಾರ್ಯಕ್ರಮಗಳ ಮೂಲಕ ಗುಂಪಿನ ಸದಸ್ಯರಿಗೆ ಹಿಡುವಳಿ ಯೋಜನೆ ತಯಾರಿಸಿ ವಿವಿಧ ತರಬೇತಿ, ತಂತ್ರಜ್ಞಾನ ಅಳವಡಿಕೆ ಹಾಗೂ ಆರ್ಥಿಕ ಸಹಾಯ ಪಡೆಯುವಲ್ಲಿ ಸಹಕಾರ ನೀಡುತ್ತಿದೆ. ಕೃಷಿಕರೊಂದಿಗೆ ಕಾರ್ಯ ನಿರ್ವಹಿಸಲು ತರಬೇತಿ ಪಡೆದ ಕೃಷಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದರು.

ಪರಿಸರ ಮತ್ತು ಸಾಮಾಜಿಕ ಅರಣ್ಯೀಕರಣ ಕುರಿತಂತೆ ಯೋಜನೆಯು ವಿಶೇಷ ಪ್ರಾಮುಖ್ಯತೆ ನೀಡಿದೆ. ತರಬೇತಿ, ಗ್ರಾಮ ಮಟ್ಟದ ಕಾರ್ಯಕ್ರಮ, ಜಲಾನಯನ ಹಾಗೂ ಪರಿಸರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜ್ಞಾನದೀಪ ಕಾರ್ಯಕ್ರಮದ ಮೂಲಕ ಪ್ರಾಥಮಿಕ ಶಾಲೆಗಳಿಗೆ ಸ್ವಯಂ ಸೇವಾ ನೆಲೆಯಲ್ಲಿ ಶಿಕ್ಷಕರನ್ನು ಒದಗಿಸಿರುತ್ತದೆ ಎಂದು ತಿಳಿಸಿದರು.

ಎ.ಪಿ.ಎಂ.ಸಿ. ಅಧ್ಯಕ್ಷ ತೀರ್ಥೇಶ್ ಕಾರ್ಯಕ್ರಮ ಉದ್ಘಾಟಿಸಿದರು.ಎ.ಪಿ.ಎಂ.ಸಿ.ನಿರ್ದೇಶಕ ಎಲ್.ಸುರೇಶ್, ನಗರಸಭೆ ಉಪಾಧ್ಯಕ್ಷೆ ಸೆಲ್ವಿಬಾಬು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಗಣೇಶ್, ಆದಿವಾಸಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಬಿ.ಎಸ್.ಬಸವರಾಜು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.