ADVERTISEMENT

ನಂಜುಂಡಸ್ವಾಮಿ ಅಧ್ಯಕ್ಷ

ಚಾಮರಾಜನಗರ ನಗರಸಭೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 7:51 IST
Last Updated 14 ಸೆಪ್ಟೆಂಬರ್ 2013, 7:51 IST

ಚಾಮರಾಜನಗರ: ಚಾಮರಾಜನಗರ ನಗರಸಭೆಯಲ್ಲಿ ಕಾಂಗ್ರೆಸ್‌ ಹಾಗೂ ಎಸ್‌ಡಿಪಿಐ(ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ) ಮೈತ್ರಿ ಸೂತ್ರ ಪಠಿಸಿದ್ದು, ಅಧ್ಯಕ್ಷರಾಗಿ ‘ಕೈ’ ಪಾಳಯದ ಹಿರಿಯ ಸದಸ್ಯ ಎಸ್‌. ನಂಜುಂಡಸ್ವಾಮಿ ಹಾಗೂ ಉಪಾಧ್ಯಕ್ಷೆಯಾಗಿ ಎಸ್‌ಡಿಪಿಐ ಸದಸ್ಯೆ ವಹೀದಾ ಖಾನಂ ಆಯ್ಕೆಯಾಗಿದ್ದಾರೆ.

ನಗರದ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಉಪಾಧ್ಯಕ್ಷ  ಸ್ಥಾನ ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿತ್ತು.

ನಗರಸಭೆಯಲ್ಲಿ 31 ಸದಸ್ಯ ಸ್ಥಾನಗಳಿವೆ. ಇದರಲ್ಲಿ ಕಾಂಗ್ರೆಸ್‌– 8, ಬಿಜೆಪಿ– 4, ಜೆಡಿಎಸ್‌– 1, ಕೆಜೆಪಿ– 6, ಬಿಎಸ್‌ಆರ್‌(ಕಾಂ)– 2, ಎಸ್‌ಡಿಪಿಐ– 4, ವಾಟಾಳ್‌– 2 ಹಾಗೂ 4 ಪಕ್ಷೇತರ ಸದಸ್ಯರು ಇದ್ದಾರೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಕೈಪಾಳಯದ ನಂಜುಂಡಸ್ವಾಮಿ ಹಾಗೂ ಕೆಜೆಪಿಯ ಶ್ರೀಕಾಂತ್‌ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಡಿಪಿಐನ ವಹೀದಾ ಖಾನಂ ಹಾಗೂ ಕೆಜೆಪಿಯ ವಿಜಯಕುಮಾರಿ ನಾಮಪತ್ರ ಸಲ್ಲಿಸಿದ್ದರು.

ನಂಜುಂಡಸ್ವಾಮಿ ಹಾಗೂ ವಹೀದಾ ಖಾನಂ ಅವರಿಗೆ ತಲಾ 20 ಮತ ಬಿದ್ದವು. ಕೆಜೆಪಿ ಅಭ್ಯರ್ಥಿಗಳು ತಲಾ 12 ಮತ ಪಡೆದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಪರವಾಗಿ ಕಾಂಗ್ರೆಸ್‌ನ 8, ಎಸ್‌ಡಿಪಿಐನ 4, ವಾಟಾಳ್‌ ಪಕ್ಷದ 2, ಮೂವರು ಪಕ್ಷೇತರರು, ಜೆಡಿಎಸ್‌ನ ಒಬ್ಬ ಸದಸ್ ಸೇರಿದಂತೆ ಸಂಸದ ಆರ್‌. ಧ್ರುವನಾರಾಯಣ, ಶಾಸಕ ಸಿ. ಪುಟ್ಟರಂಗಶೆಟ್ಟಿ ಮತ ಚಲಾಯಿಸಿದರು. ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಎಚ್.ಎಸ್‌. ಸತೀಶ್‌ಬಾಬು ಕರ್ತವ್ಯ ನಿರ್ವಹಿಸಿದರು. ನಂಜುಂಡಸ್ವಾಮಿ ಈ ಹಿಂದೆಯೂ ಒಂದು ಬಾರಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೆಜೆಪಿಗೆ ಸೇರ್ಪಡೆಯಾಗಿದ್ದ ಚಂಗುಮಣಿ ಗೈರುಹಾಜರಾಗಿದ್ದರು. ನೂತನ ಅಧ್ಯಕ್ಷ ನಂಜುಂಡಸ್ವಾಮಿ ಹಾಗೂ ಉಪಾಧ್ಯಕ್ಷೆ ವಹೀದಾ ಖಾನಂ ಅವರನ್ನು ಸಂಸದ ಆರ್‌. ಧ್ರುವನಾರಾಯಣ, ಶಾಸಕ ಸಿ. ಪುಟ್ಟರಂಗಶೆಟ್ಟಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.