ADVERTISEMENT

ನನಸಾಗದ ಅಭಿವೃದ್ಧಿ ಕನಸು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 7:10 IST
Last Updated 17 ಫೆಬ್ರುವರಿ 2011, 7:10 IST

ಕೊಳ್ಳೇಗಾಲ: ‘ಸುವರ್ಣ ಗ್ರಾಮ’ ಯೋಜನೆಯಡಿ ತಾಲ್ಲೂಕಿನ ಅನೇಕ ರಸ್ತೆಗಳ ದುರಸ್ತಿಗೆ ಅಗತ್ಯ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿಗಳಿಗೆ ಗ್ರಹಣ ಹಿಡಿದಿದೆ.ತಾಲ್ಲೂಕಿನ ಹನೂರು ವ್ಯಾಪ್ತಿಯ ಹೂಗ್ಯಂನಿಂದ ಜಲ್ಲಿಪಾಳ್ಯ ಮಾರ್ಗ ತಂಡಯ್ಯನದೊಡ್ಡಿ ವರೆಗಿನ 9 ಕಿ.ಮೀ ರಸ್ತೆ 2 ಕೋಟಿ, ಕಂಚಗಳ್ಳಿ ಸೋಲಿಗರ ದೊಡ್ಡಿಯಿಂದ ಲೊಕ್ಕನಹಳ್ಳಿ ಮುಖ್ಯರಸ್ತೆಗೆ ಸೇರುವ 5 ಕಿ.ಮೀ ಸಂಪರ್ಕ ರಸ್ತೆ 1.20 ಕೋಟಿ, ಮೈಸೂರಪ್ಪನ ದೊಡ್ಡಿಯಿಂದ ಮಾಳಿಗನತ್ತ ಮಾರ್ಗ ಕುಡವಾಳೆದೊಡ್ಡಿ ಸೇರುವ 5 ಕಿ.ಮೀ 1.20 ಕೋಟಿ. ಟಿ.ಸಿಹುಂಡಿ, ಲಿಂಗಣಾಪುರ ಮುಖ್ಯರಸ್ತೆ ವರೆಗೆ 2 ಕಿ.ಮೀ ರಸ್ತೆ 60 ಲಕ್ಷ. ಹಳೆ ಹಂಪಾಪುರ ಗ್ರಾಮದಿಂದ ಮುಳ್ಳೂರು ಮುಖ್ಯರಸ್ತೆ ವರೆಗೆ 2 ಕಿ.ಮೀ ರಸ್ತೆ 40 ಲಕ್ಷ. ಬಾಪೂನಗರದಿಂದ ಶಂಕನಪುರ ಮಾರ್ಗ ಮುಳ್ಳೂರು ರಸ್ತೆ ವರೆಗೆ1.5 ಕಿ.ಮೀ 38 ಲಕ್ಷ, ಕುಂತೂರು ಮೋಳೆಯಿಂದ ಮೈಸೂರು ಮುಖ್ಯರಸ್ತೆ ವರೆಗೆ 1.2 ಕಿ.ಮೀ 35 ಲಕ್ಷ ಅಂದಾಜಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ.

ಕೇಂದ್ರ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆಯಾಗದ ಕಾರಣ ರಾಜ್ಯ ಸರ್ಕಾರ ‘ಸುವರ್ಣ ಗ್ರಾಮ ರಸ್ತೆ’ ಯೋಜನೆಯಡಿ ಈ ರಸ್ತೆಗಳ ದುರಸ್ತಿಗೆ ಅನುಮೋದನೆ ದೊರಕಿದೆ.ಟೆಂಡರ್ ಪ್ರಕ್ರಿಯೆ ನಡೆದು ವರ್ಷ ಕಳೆದರೂ ಯೋಜನೆಗೆ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿ ಕೊಳ್ಳಲು ಮುಂದಾಗಿಲ್ಲ. ಹೀಗಾಗಿ ರಸ್ತೆ ಕಾಮಗಾರಿಗೆ ಗ್ರಹಣ ಹಿಡಿದು, ರಸ್ತೆಗಳು ತೀರಾ ಹದಗೆಟ್ಟು ಜನ ಸಂಚರಿಸುವುದು ದುಸ್ತರವಾಗಿದೆ.

ತಾಲ್ಲೂಕಿನಲ್ಲಿ ಕೇಂದ್ರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅನೇಕ ಉತ್ತಮ ರಸ್ತೆಗಳು ನಿರ್ಮಾಣ ಗೊಂಡು ರೈತರು ಹಾಗೂ ಜನತೆಗೆ ಉತ್ತಮ ಸಂಪರ್ಕ ವ್ಯವಸ್ಥೆ ದೊರಕಿದೆ. ಸುವರ್ಣ ಗ್ರಾಮ ರಸ್ತೆ ಯೋಜನೆ ಯಡಿ ಬಾಕಿ ಉಳಿದಿರುವ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರದಿಂದ ಅಗತ್ಯ ಹಣ ಬಿಡುಗಡೆಗೊಳಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.